
(ನ್ಯೂಸ್ ಕಡಬ) newskadaba.com, ನ .12 .ಉಪ್ಪಿನಂಗಡಿಯ ಜನಪ್ರಿಯ ದಿನಸಿ ಅಂಗಡಿಯೊಂದಕ್ಕೆ ನಸುಕಿನ ಜಾವ ನುಗ್ಗಿದ ಕಳ್ಳನೊಬ್ಬ ಬೆಳ್ಳುಳ್ಳಿ ಚೀಲ ಕದಿಯಲು ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಸುಕಿನ ಸುಮಾರು 2.30ರ ವೇಳೆಗೆ ಅಂಗಡಿಗೆ ನುಗ್ಗಿದ ಕಳ್ಳ, ಬೆಳ್ಳುಳ್ಳಿಯನ್ನು ಮತ್ತೊಂದು ಗೋಣಿಚೀಲಕ್ಕೆ ತುಂಬಿಸಿಕೊಂಡಿದ್ದಾನೆ. ಈ ವೇಳೆ ಸಿಸಿಟಿವಿ ಕ್ಯಾಮೆರಾ ಗಮನಕ್ಕೆ ಬಂದಿದ್ದು, ತಕ್ಷಣ ಲುಂಗಿಯಿಂದ ಮುಖ ಮುಚ್ಚಿಕೊಂಡಿದ್ದಾನೆ.
ಬಳಿಕ ಚೀಲವನ್ನು ಹೊರಗೆ ಎಳೆದುಕೊಂಡು ಹೋಗಿ ಸಮೀಪದ ವಾಹನದ ಬಳಿ ಇರಿಸಿದ್ದಾನೆ. ಆದರೆ, ನಾಲ್ಕೈದು ನಿಮಿಷಗಳ ಕಾಲ ಚೀಲದ ಸುತ್ತ ಅಲೆದಾಡಿದ ಕಳ್ಳ, ಕೊನೆಗೆ ಅದನ್ನು ಅಲ್ಲೇ ಬಿಟ್ಟು ಬರಿಗೈಯಲ್ಲಿ ಪರಾರಿಯಾಗಿದ್ದಾನೆ.
ಈ ಘಟನೆಯ ಹಿಂದೆ ದೈವಿಕ ಶಕ್ತಿಯ ಕೈವಾಡವಿದೆ ಎಂಬುದು ಅಂಗಡಿ ಮಾಲೀಕರ ನಂಬಿಕೆಯಾಗಿದೆ. ಮತ್ತೊಂದೆಡೆ, ಸಿಸಿಟಿವಿ ಕಣ್ಗಾವಲು, ಪೊಲೀಸ್ ಗಸ್ತು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ ಇದ್ದರೂ ಕಳ್ಳ ಯಾರ ಗಮನಕ್ಕೂ ಬೀಳದೆ ಪರಾರಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.




