
(ನ್ಯೂಸ್ ಕಡಬ) newskadaba.com, ನ .12 . ‘ಮಾಂಡ್ ಸೊಭಾಣ್’ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಸುದೀರ್ಘ ‘ಕೊಂಕಣಿ ಸಂಗೀತ ಮ್ಯಾರಥಾನ್’ ಕೊಂಕಣಿ ಭಾಷೆಯ ಸಮೃದ್ಧತೆ ಹಾಗೂ ಅದರ ಸಂಗೀತ ಪರಂಪರೆಯನ್ನು ಎತ್ತಿ ಹಿಡಿಯುತ್ತಿದ್ದು, ಎಲ್ಲಾ ವರ್ಗದ ಸಂಗೀತ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.
ಈ ಮಹೋತ್ಸವಕ್ಕೆ ಪ್ರತಿದಿನ ಆಗಮಿಸುವ ವೀಕ್ಷಕರಲ್ಲಿ ಉರ್ವಾ ಸ್ಟೋರ್ನ 74 ವರ್ಷದ ಗ್ರೇಸ್ ಡಿಸೋಜಾ ಪ್ರಮುಖರು. ಕೊಂಕಣಿ ಸಂಗೀತದ ಮೇಲಿನ ಅವರ ಅಪಾರ ಪ್ರೀತಿ ಹಾಗೂ ಉತ್ಸಾಹ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿದಿನ ಬೆಳಗ್ಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವ ಅವರು, ಸಂಜೆಯವರೆಗೆ ಇಡೀ ದಿನ ಗಾಯನ ಪ್ರದರ್ಶನಗಳನ್ನು ಆನಂದಿಸುತ್ತಾರೆ.
ತಮ್ಮ ಅನುಭವವನ್ನು ಹಂಚಿಕೊಂಡ ಅವರು, “ಕಾರ್ಯಕ್ರಮದ ವಾತಾವರಣವು ತಮಗೆ ತುಂಬಾ ಇಷ್ಟವಾಗಿದೆ. ಯಾವುದೇ ತಡೆಯಿಲ್ಲದೆ ಒಂದು ತಂಡದ ನಂತರ ಮತ್ತೊಂದು ತಂಡ ಸತತವಾಗಿ ಪ್ರದರ್ಶನ ನೀಡುತ್ತಿರುವ ರೀತಿ ತಮಗೆ ಅತ್ಯಂತ ಪ್ರಭಾವಶಾಲಿಯಾಗಿ ಕಂಡಿದೆ” ಎಂದು ಸಂಘಟಕರು ಮಾಡಿರುವ ಉತ್ತಮ ವ್ಯವಸ್ಥೆಯನ್ನು ಶ್ಲಾಘಿಸಿದರು.
“ಈ ಹಾಡುಗಳನ್ನು ಕೇಳುವಾಗ ನನ್ನ ಮನಸ್ಸಿನಲ್ಲಿ ಯಾವುದೇ ದುಃಖವಿರುವುದಿಲ್ಲ. ಇವು ನನ್ನನ್ನು ಶಾಂತಿ, ಸಂತೋಷ ಮತ್ತು ತೃಪ್ತಿಯಿಂದ ತುಂಬಿಸುತ್ತವೆ. ಇಲ್ಲಿ ಕುಳಿತು ಹಾಡುಗಳನ್ನು ಕೇಳುವುದು ನನಗೆ ಅತ್ಯಂತ ಸಂತಸ ತರುತ್ತದೆ. ಇದೊಂದು ಅದ್ಭುತ ಅನುಭವ” ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಗ್ರೇಸ್ ಅವರ ಪಾಲಿಗೆ ಈ ಮ್ಯಾರಥಾನ್ ಕೇವಲ ಒಂದು ಸಂಗೀತ ಕಾರ್ಯಕ್ರಮವಲ್ಲ. ಅದು ಕೊಂಕಣಿ ಹಾಡುಗಳ ಮೇಲಿನ ತಮ್ಮ ಪ್ರೀತಿಯನ್ನು ಸಂಭ್ರಮಿಸಲು ಮತ್ತು ಸಂಗೀತ ತರುವ ಶಾಂತಿ ಹಾಗೂ ಸಂತೋಷವನ್ನು ಅನುಭವಿಸಲು ಸಿಕ್ಕ ಅಪರೂಪದ ಅವಕಾಶ.
ಇನ್ನೂ ನಾಲ್ಕು ದಿನಗಳ ಗಾಯನ ಬಾಕಿ ಇದ್ದು, ಗ್ರೇಸ್ ಅವರ ದಿನನಿತ್ಯದ ಉಪಸ್ಥಿತಿಯು ಈ ಸಾಂಸ್ಕೃತಿಕ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ. ಸಂಗೀತಕ್ಕೆ ವಯಸ್ಸಿನ ಹಂಗಿಲ್ಲ ಮತ್ತು ಭಾಷೆ-ಸಂಸ್ಕೃತಿಯ ಮೇಲಿನ ಪ್ರೀತಿ ಕಾಲಕ್ರಮೇಣ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದಾರೆ.




