ಮಂಗಳೂರು: ಸಾಕು ನಾಯಿಗಳ ನಿರ್ವಹಣೆಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಪ್ರಕಟ; ನಿಯಮ ಮೀರಿದರೆ ಭಾರಿ ದಂಡ!

(ನ್ಯೂಸ್‌ ಕಡಬ) newskadaba.com, ಅ .28 .ಮಂಗಳೂರು: ಸುಪ್ರೀಂ ಕೋರ್ಟ್ ಆದೇಶ ಹಾಗೂ ಪ್ರಾಣಿ ಕಲ್ಯಾಣ ಕಾಯ್ದೆಗಳ ಅನ್ವಯ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳ ನಿರ್ವಹಣೆಗಾಗಿ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಎಲ್ಲಾ ಸಾಕು ನಾಯಿಗಳಿಗೆ ರೇಬೀಸ್ ಸೇರಿದಂತೆ ಅಗತ್ಯ ಲಸಿಕೆಗಳನ್ನು ಹಾಕಿಸಿ, ಪ್ರತಿ ವರ್ಷ ಬೂಸ್ಟರ್ ಡೋಸ್ ಕೊಡಿಸುವುದು ಕಡ್ಡಾಯ. ಅಧಿಕಾರಿಗಳ ತಪಾಸಣೆ ವೇಳೆ ಲಸಿಕಾ ಪ್ರಮಾಣಪತ್ರ ತೋರಿಸಬೇಕು.ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳನ್ನು ಮುಕ್ತವಾಗಿ ಬಿಡುವಂತಿಲ್ಲ. ಹೊರಗೆ ಕರೆತರುವಾಗ ಕಡ್ಡಾಯವಾಗಿ ಬಾರು ಬಳಸಬೇಕು. ನಾಯಿಗಳು ಮಲವಿಸರ್ಜನೆ ಮಾಡಿದರೆ ಮಾಲೀಕರೇ ತಕ್ಷಣ ಸ್ವಚ್ಛಗೊಳಿಸಬೇಕು; ಇಲ್ಲದಿದ್ದರೆ ಸ್ಥಳದಲ್ಲೇ 1,000 ರೂ. ನಿಂದ 5,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ.ಸಂತಾನೋತ್ಪತ್ತಿಗೆ ಅಧಿಕೃತವಾಗಿ ನೋಂದಾಯಿಸದ ಎಲ್ಲಾ ಗಂಡು ಮತ್ತು ಹೆಣ್ಣು ಸಾಕು ನಾಯಿಗಳಿಗೆ ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು.ಶ್ವಾನ ಸಂತಾನೋತ್ಪತ್ತಿ ಮತ್ತು ಮಾರಾಟ ಮಾಡುವವರು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಕಡ್ಡಾಯವಾಗಿ ನೋಂದಣಿ ಪ್ರಮಾಣಪತ್ರ ಪಡೆಯಬೇಕು.

ರಸ್ತೆ, ಖಾಲಿ ಜಾಗ ಅಥವಾ ಕಸದ ರಾಶಿಯಲ್ಲಿ ನಾಯಿಗಳನ್ನು ಅಥವಾ ಮರಿಗಳನ್ನು ತ್ಯಜಿಸುವುದು ಗಂಭೀರ ಅಪರಾಧ. ಇದರಿಂದ ಪ್ರಾಣಿಗೆ ಸಾವು ಅಥವಾ ಅಂಗವೈಕಲ್ಯ ಉಂಟಾದರೆ ಭಾರತೀಯ ನ್ಯಾಯ ಸಂಹಿತೆಯಡಿ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಗರಿಷ್ಠ 50,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ.ಯಾರಾದರೂ ಸಾಕು ನಾಯಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ಬಿಡುವುದು ಕಂಡುಬಂದಲ್ಲಿ, ಸಾರ್ವಜನಿಕರು ಫೋಟೋ ಅಥವಾ ವಿಡಿಯೋ ಸಮೇತ ಪಾಲಿಕೆಯ ಸಹಾಯವಾಣಿ 9449007722 ಅಥವಾ ರಾಜ್ಯದ ಸಹಾಯವಾಣಿ 1902 ಗೆ ಮಾಹಿತಿ ನೀಡಬಹುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Scroll to Top