ಅಸ್ಸಾಂನ ಗುವಾಹಟಿಯಲ್ಲಿ ಭೀಕರ ಗುಂಡಿನ ದಾಳಿ; ಹೋಟೆಲ್ ಮಾಲಕಿ ಸೇರಿ ಐವರು ಮೃತ್ಯು

(ನ್ಯೂಸ್‌ ಕಡಬ) newskadaba.com, ಅ. 27 . ಭೀಕರ ಗುಂಡಿನ ದಾಳಿಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಸ್ಸಾಂನ ರಾಜಧಾನಿ ಗುವಾಹಟಿಯ ಉಲುಬಾರಿ ಪ್ರದೇಶದ ಬೋರಾ ಸರ್ವಿಸ್ ಸಮೀಪವಿರುವ ಹೋಟೆಲ್ ಬಳಿ ಸೋಮವಾರ ರಾತ್ರಿ ನಡೆದಿದೆ. ಘಟನೆಯ ಬೆನ್ನಲ್ಲೇ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆಯಲ್ಲಿ ಹೋಟೆಲ್ ಓನರ್, ಆಕೆಯ ಮಗ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಹೋಟೆಲ್ ಗುತ್ತಿಗೆ ಒಪ್ಪಂದ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರ ಕಡೆಯವರು ಹಾಗೂ ಗುತ್ತಿಗೆ ಪಡೆದವರ ನಡುವಿನ ವಾಗ್ವಾದವೇ ಈ ಮಾರಣಾಹಾಮಿಕ ದಾಳಿಗೆ ಕಾರಣವೆಂದು ಶಂಕಿಸಲಾಗಿದೆ ಎಂದು ಗುವಾಹಟಿ ಪೊಲೀಸ್ ಕಮಿಷನರ್ ಪಾರ್ಥ ಸಾರಥಿ ಮಹಂತ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಯನ್ನು ಘನಕಾಂತ ಗೊಗೊಯ್ ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಣ ಕಳೆದುಕೊಂಡಿರುವ ಐವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮತ್ತೊಬ್ಬರು ಹಾಗೂ ಗಾಯಗೊಂಡಿರುವ ವ್ಯಕ್ತಿ ಅದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಪ್ರಕರಣದ ಆಳವಾದ ತನಿಖೆಯನ್ನು ಕೈಗೊಂಡಿದ್ದಾರೆ. ಹೋಟೆಲ್ ಲೀಸ್ ಒಪ್ಪಂದದ ಹಿಂದಿನ ಒಳಸಂಚು ಮತ್ತು ವೈಯಕ್ತಿಕ ದ್ವೇಷದ ಆಯಾಮಗಳ ಬಗ್ಗೆಯೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮವನ್ನು ಕಠಿಣವಾಗಿ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Scroll to Top