
ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು
(ನ್ಯೂಸ್ ಕಡಬ) newskadaba.com, ಅ.09 .ಉಡುಪಿಯ ಮುದರಂಗಡಿಯ ಕೊಲೆಯಾದ ಉದ್ಯಮಿ ಡೇವಿಡ್ ಡಿಸೋಜಾ ಅವರ ಮಗ ಹಾಗೂ ಇತರ ಪ್ರಮುಖ ಉದ್ಯಮಿಗಳಿಗೆ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ವಾಟ್ಸಾಪ್ ಬೆದರಿಕೆ ಕರೆಗಳು ಬಂದಿವೆ.ತಂದೆಯಿಂದ ತಮ್ಮ ಸಹೋದರನಿಗೆ ನಷ್ಟವಾಗಿದೆ ಎಂದು ಆರೋಪಿಸಿ, ನಷ್ಟ ತುಂಬಿಕೊಡಲು 5 ಕೋಟಿ ರೂಪಾಯಿ ನೀಡಬೇಕೆಂದು ಡೇವಿಡ್ ಡಿಸೋಜಾ ಅವರ ಮಗನಿಗೆ ಜೀವ ಬೆದರಿಕೆ ಹಾಕಲಾಗಿದೆ.
ಈ ಸಂಬಂಧ ಶಿರ್ವಾ, ಪಡುಬಿದ್ರಿ ಹಾಗೂ ಮೂಲ್ಕಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಹೊರರಾಜ್ಯದ ಶೂಟರ್‌ಗಳು ಭಾಗಿಯಾಗಿದ್ದು, ಕಿಶೋರ್ ಪೂಜಾರಿ ಹಾಗೂ ಸಹಚರರು ಹೇಮಂತ್ ಪೂಜಾರಿ ಸಹಾಯದಿಂದ ಈ ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿರುವ ಹೇಮಂತ್ ಪೂಜಾರಿಯೇ ಈ ಕರೆಗಳನ್ನು ಮಾಡಿದ್ದಾನೋ ಅಥವಾ ಆತನ ಹೆಸರು ಹೇಳಿಕೊಂಡು ಅಪರಿಚಿತರು ಹಣ ಸುಲಿಗೆಗೆ ಯತ್ನಿಸುತ್ತಿದ್ದಾರೋ ಎಂಬ ಕೋನದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




