ಮಂಗಳೂರು/ಉಡುಪಿ: ಭಾರಿ ಮಳೆಗೆ ಮೆಸ್ಕಾಂಗೆ ಅಪಾರ ನಷ್ಟ – 5,000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಭಗ್ನ!

(ನ್ಯೂಸ್‌ ಕಡಬ) newskadaba.com, ಸೆ.28  .ಜೂನ್‌ನಿಂದ ಆಗಸ್ಟ್ ಅವಧಿಯಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 5,077 ವಿದ್ಯುತ್ ಕಂಬಗಳು ಹಾಗೂ 24 ಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿವೆ.

ಮಳೆಯ ಆರ್ಭಟಕ್ಕೆ 8 ಜನರು ಜೀವ ಕಳೆದುಕೊಂಡಿದ್ದು, 4 ಜಾನುವಾರುಗಳು ಮೃತಪಟ್ಟಿವೆ. ಒಟ್ಟು 468 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಿವೆ.ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಸಂಪರ್ಕಿಸುವ 1,500.66 ಕಿ.ಮೀ ರಸ್ತೆ ಹಾಳಾಗಿದ್ದು, 41 ಸೇತುವೆಗಳು ಮತ್ತು ಕಲ್ವರ್ಟ್‌ಗಳು ಹಾನಿಗೊಳಗಾಗಿವೆ.

ಜೊತೆಗೆ 30.96 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ ₹6,000 ಹಾಗೂ ಸಂಪೂರ್ಣ ಹಾನಿಯಾದ ಮನೆಗಳಿಗೆ ₹1.20 ಲಕ್ಷ ಕೇಂದ್ರ ಸರ್ಕಾರದ ನಿಯಮಾವಳಿಯಂತೆ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನಿಗದಿಪಡಿಸಲಿದೆ. ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಪ್ರಕಾರ, ಬಹುತೇಕ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದ್ದು, ಬಾಕಿ ಪ್ರಕರಣಗಳ ಪ್ರಕ್ರಿಯೆ ಪ್ರಗತಿಯಲ್ಲಿದೆ

Scroll to Top