ಬಿಸಿಲಿನ ಝಳಕ್ಕೆ ಸಿಕ್ಕಿತು ಮುಕ್ತಿ: ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ತಂಪರೆದ ಮಳೆ!

(ನ್ಯೂಸ್‌ ಕಡಬ) newskadaba.com,  ಸೆ.21 . ಮಂಗಳೂರು: ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲು ಹಾಗೂ ಉರಿ ಸೆಖೆಯಿಂದ ಬಳಲುತ್ತಿದ್ದ ಮಂಗಳೂರು ಸೇರಿದಂತೆ ಕರಾವಳಿಯ ಜನತೆಗೆ ಸೋಮವಾರ ಸುರಿದ ಮಳೆ ಕೊಂಚ ನೆಮ್ಮದಿ ತಂದಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ನಗರದ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಕರಾವಳಿ ಕರ್ನಾಟಕದಲ್ಲಿ ಸೆಪ್ಟೆಂಬರ್ 21 ರಿಂದ 24 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.ವಿಶೇಷವಾಗಿ ಸೆಪ್ಟೆಂಬರ್ 21 ಮತ್ತು 22 ರಂದು ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯೊಂದಿಗೆ ಗುಡುಗು, ಮಿಂಚಿನ ಎಚ್ಚರಿಕೆ ನೀಡಲಾಗಿದೆ.

ಸೆಪ್ಟೆಂಬರ್ 20 ರ ದಾಖಲೆ ಪ್ರಕಾರ ಮಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 25.5°C (ಸಾಮಾನ್ಯಕ್ಕಿಂತ 2.3°C ಹೆಚ್ಚು) ದಾಖಲಾಗಿತ್ತು. ಕಳೆದ 24 ಗಂಟೆಗಳಲ್ಲಿ 3 ಮಿ.ಮೀ. ಮಳೆಯಾಗಿತ್ತು.ಈ ದಿನಗಳಲ್ಲಿ ಕರಾವಳಿ ಭಾಗಕ್ಕೆ ಯಾವುದೇ ವಿಶೇಷ ಮಳೆ ಮುನ್ನೆಚ್ಚರಿಕೆ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.ಮುಂದಿನ ಎರಡು ದಿನಗಳು ಭಾರೀ ಮಳೆ ಹಾಗೂ ಗುಡುಗು-ಮಿಂಚಿನ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

Scroll to Top