(ನ್ಯೂಸ್ ಕಡಬ) newskadaba.com, ಸೆ .08 .ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುವ ಹಣದ ದುರುಪಯೋಗ, ಕಳ್ಳತನ ಹಾಗೂ ನಕಲಿ ರಸೀದಿ ಹಾವಳಿಗೆ ಕಡಿವಾಣ ಹಾಕಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಈ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ.

ಹುಂಡಿ ಕಾಣಿಕೆ, ಸೇವಾ ಟಿಕೆಟ್, ಪ್ರಸಾದ ಮಾರಾಟ, ವಸತಿ ಹಾಗೂ ವಾಹನ ನಿಲುಗಡೆ ಶುಲ್ಕ ಸೇರಿದಂತೆ ಪ್ರತಿಯೊಂದು ಆದಾಯಕ್ಕೂ ಯುಪಿಐ , ಕ್ಯೂಆರ್ ಕೋಡ್ ಹಾಗೂ ಡಿಜಿಟಲ್ ಕಿಯೋಸ್ಕ್ ಮೂಲಕ ಪಾವತಿಗೆ ವ್ಯವಸ್ಥೆ ಮಾಡಬೇಕು.ಪ್ರತಿಯೊಂದು ರಸೀದಿಯ ಮೇಲೂ ಮುದ್ರಿತ ಕ್ಯೂಆರ್ ಕೋಡ್ ಇರಲಿದ್ದು, ಭಕ್ತರು ಸ್ಕ್ಯಾನ್ ಮಾಡುವ ಮೂಲಕ ರಸೀದಿಯ ನೈಜತೆಯನ್ನು ಕೇಂದ್ರ ಸರ್ವರ್ನಲ್ಲಿ ತಕ್ಷಣ ಪರಿಶೀಲಿಸಬಹುದು.
2020ರಲ್ಲಿ ಬಳಕೆದಾರ ಹೆಸರು ಮತ್ತು ಗುಪ್ತಪದ ದುರುಪಯೋಗಪಡಿಸಿಕೊಂಡು ನಕಲಿ ರಸೀದಿ ನೀಡಿದ್ದ ಉಡುಪಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ನೌಕರ ರಾಜೇಶ್ ನಾಯಕ್ ವಜಾ ಕ್ರಮವನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಎತ್ತಿಹಿಡಿದಿದೆ.ಈ ನೂತನ ಮಾರ್ಗಸೂಚಿಗಳಿಂದ ದೇವಸ್ಥಾನಗಳ ಲೆಕ್ಕಪತ್ರಗಳಲ್ಲಿ ಸಂಪೂರ್ಣ ಪಾರದರ್ಶಕತೆ ಬರಲಿದ್ದು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ದುರಾಸೆಗೆ ಸಂಪೂರ್ಣ ಬ್ರೇಕ್ ಬೀಳಲಿದೆ.




