ನಕಲಿ NCIB ಅಧಿಕಾರಿ ಶ್ಯಾಮ್ ಪೀಟರ್ ಬಂದನ: 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ವಂಚಕ ಸಿಸಿಬಿ ಬಲೆಗೆ

(ನ್ಯೂಸ್‌ ಕಡಬ) newskadaba.com, ಸೆ.01: ರಾಷ್ಟ್ರೀಯ ಅಪರಾಧ ತನಿಖಾ ದಳದ ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಕುಖ್ಯಾತ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಕೇರಳ ಮೂಲದ, ಪ್ರಸ್ತುತ ಲಕ್ನೋದಲ್ಲಿ ವಾಸಿಸುತ್ತಿದ್ದ ಶ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತಾರಕನ್ (64) ಎಂದು ಗುರುತಿಸಲಾಗಿದೆ.

NCIB ಅಧಿಕಾರಿ ಎಂದು ನಟಿಸಿ ಬ್ಯಾಂಕ್ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿದವರನ್ನು ಗುರಿಯಾಗಿಸಿ ಹಣ ಸುಲಿಗೆ ಮಾಡುತ್ತಿದ್ದ. 2019ರಲ್ಲಿ ಮಂಗಳೂರಿನ ಪಂಪ್‌ವೆಲ್‌ನಲ್ಲಿ ಈತನ ಗ್ಯಾಂಗ್‌ನ 8 ಜನರನ್ನು ಬಂಧಿಸಲಾಗಿತ್ತು.

ಜಾಮೀನು ಪಡೆದು ಹೊರಬಂದ ನಂತರ ಕಳೆದ 3 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.ಗುರುತು ಮರೆಮಾಚಲು ಆಂಟನಿ, ರಾಹುಲ್ ಪೀಟರ್, ರಾಜೇಶ್ ರಾಬಿನ್ಸನ್, ಡ್ಯಾನಿ ತಾರಕನ್ ಸೇರಿದಂತೆ ಸುಮಾರು 11 ಹೆಸರುಗಳನ್ನು ಬಳಸುತ್ತಿದ್ದ.

ಈತನ ವಿರುದ್ಧ 2001ರಿಂದಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದೆ.ಕರ್ನಾಟಕ, ಬಿಹಾರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈತನ ವಿರುದ್ಧ 17 ವಂಚನೆ ಪ್ರಕರಣಗಳು ದಾಖಲಾಗಿವೆ.ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Scroll to Top