ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಸೆ. 01. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಂದ ಕೆಳಕಂಡ ಯೋಜನೆಗಳಿಗೆ 2026-27ನೇ ಸಾಲಿನಲ್ಲಿ ಸಾಲ ಸಹಾಯಧನ ಸೌಲಭ್ಯ ಪಡೆಯಲು https://kmdconline.karnataka.gov.in ಆನ್‍ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 17.
ಅರ್ಜಿದಾರರು ತಹಶೀಲ್ದಾರರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ವಾಸದ ದೃಢೀಕರಣಕ್ಕಾಗಿ ಪಡಿತರ ಚೀಟಿಯನ್ನು ಹೊಂದಿರಬೇಕು. ನಿಗಮದ ಇತರ ಯೋಜನೆಗಳಡಿಯಲ್ಲಿ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ನಿಗಮದಿಂದ ಈಗಾಗಲೇ ಸಾಲ ಸೌಲಭ್ಯ ಪಡೆದಿರಬಾರದು. ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷಗಳು, ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ/PSU ಸರ್ಕಾರದ ಉದ್ಯೋಗಿಯಾಗಿರಬಾರದು.
ಹೆಚ್ಚಿನ ಮಾಹಿತಿಗೆ ನಗರದ ಪಾಂಡೇಶ್ವರದ ಮೌಲಾನಾ ಆಝಾದ್ ಭವನದ 2ನೇ ಮಹಡಿಯಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ದೂರವಾಣಿ ಸಂಖ್ಯೆ: 0824-2951644) ಸಂಪರ್ಕಿಸಬಹುದು. ಆನ್‍ಲೈನ್ ಅರ್ಜಿಯ ನೋಂದಣಿ ಸಮಯದಲ್ಲಿ ತೊಂದರೆಯಿದ್ದಲ್ಲಿ ಸಹಾಯವಾಣಿ ಸಂಖ್ಯೆ 8277799990 ಅಥವಾ ತಾಲೂಕು ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







2026-27ನೇ ಸಾಲಿನ ವಿವಿಧ ಯೋಜನೆಗಳ ವಿವರ
1) ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವವಿದ್ಯಾಲಯದಿಂದ ಪದವಿ/ಸ್ನಾತಕೋತ್ತರ ಪದವಿ ಮಾಡಬಯಸುವ ವಿದ್ಯಾರ್ಥಿಗಳಿಗೆ ಗರಿಷ್ಟ ರೂ.20 ಲಕ್ಷಗಳವರೆಗೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ನಿಗಮಕ್ಕೆ ಆಸ್ತಿಯ (ಕಟ್ಟಡ/ ಜಮೀನು) ಅಡಮಾನದ ಮೇಲೆ ಮಾತ್ರ ಸಾಲ ಒದಗಿಸಲಾಗುತ್ತದೆ ಹಾಗೂ ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು. ಸಾಲದ ಮೊತ್ತವನ್ನು ವಿದ್ಯಾರ್ಥಿಯು ಭಾರತದಲ್ಲಿ ಹೊಂದಿರುವ ಬ್ಯಾಂಕ್ ಖಾತೆಗೆ ವರ್ಷಕ್ಕೆ ಒಂದು ಕಂತು ಬಿಡುಗಡೆ ಮಾಡಲಾಗುತ್ತದೆ. ವಿದ್ಯಾಭ್ಯಾಸ ಮುಗಿದ 6 ತಿಂಗಳ ನಂತರ ನಿಗದಿಪಡಿಸಿದ 60 ತಿಂಗಳ ಸಮಾನ ಕಂತುಗಳಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗಿದೆ. ಒಂದು ವೇಳೆ ಸಕಾಲಕ್ಕೆ ನಿಗಮಕ್ಕೆ ಮರುಪಾವತಿ ಮಾಡದೇ ಸುಸ್ಥಿದಾರರಾದಲ್ಲಿ ಸುಸ್ಥಿಯಾದ ಮೊತ್ತದ ಶೇಕಡಾ 2%ರಷ್ಟು ದಂಡ ಬಡ್ಡಿಯನ್ನು ವಿಧಿಸಲಾಗುತ್ತದೆ. ವಿದ್ಯಾರ್ಥಿಯ ವಯಸ್ಸು 38 ವರ್ಷಕ್ಕಿಂತ ಕಡಿಮೆಯಿದ್ದು ಹಿಂದಿನ ವರ್ಷದಲ್ಲಿ ಕನಿಷ್ಟ 60% ಅಂಕವನ್ನು ಪಡೆದಿರಬೇಕು.






2) ಸ್ವಾವಲಂಬಿ ಸಾರಥಿ ಯೋಜನೆ: ಈ ಯೋಜನೆಯಡಿ ಬ್ಯಾಂಕುಗಳು ಸಾಲ ಮಂಜೂರಾತಿ ನೀಡಿದ ಪ್ಯಾಸೆಂಜರ್ ಆಟೋರಿಕ್ಷಾ ವಾಹನವನ್ನು ಖರೀದಿಸಲು ವಾಹನದ ಆನ್‍ರೋಡ್ ಪ್ರೈಸ್ ಮೇಲೆ ಕನಿಷ್ಟ ಶೇ.50 ರಷ್ಟು (ಗರಿಷ್ಟ ರೂ. 75,000) ಹಾಗೂ ಗೂಡ್ಸ್ ವಾಹನ/ಟ್ಯಾಕ್ಸಿ ಖರೀದಿಸಲು ಶೇ.50%ರಷ್ಟು (ಗರಿಷ್ಟ ರೂ.3 ಲಕ್ಷ) ಸಹಾಯಧನ  ನೀಡಲಾಗುತ್ತದೆ. ಆಯ್ಕೆಯಾದ ಫಲಾನುಭವಿಗಳು ವಾಹನದ ಆನ್‍ರೋಡ್ ಪ್ರೈಸ್ ಮೇಲೆ ಕನಿಷ್ಟ ಶೇ.10ರಷ್ಟು ಮೊತ್ತವನ್ನು ತಮ್ಮ ಪಾಲಿನ ವಂತಿಗೆಯಾಗಿ ಸಂಬಂಧಿಸಿದ ಬ್ಯಾಂಕುಗಳಿಗೆ ಪಾವತಿಸಬೇಕು.


3)
ವ್ಯಾಪಾರ ಉದ್ದಿಮೆಗಳಿಗೆ ನೇರಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ 18 ರಿಂದ 55 ವರ್ಷದೊಳಗಿನ ನಿರುದ್ಯೋಗಿಗಳಿಗೆ ರೂ.20 ಲಕ್ಷವರೆಗೆ ಶೇ.4% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನ ಮೇಲೆ ಮಾತ್ರ ಸಾಲವನ್ನು ಒದಗಿಸಲಾಗುತ್ತದೆ. ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆಯಿರಬಾರದು. ವ್ಯಾಪಾರ ಉದ್ದಿಮೆ ಸಾಲವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಲಾಗುತ್ತದೆ.

4) ಸಾಂತ್ವನ ಯೋಜನೆ: ಕೋಮು ಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭದಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ಕನಿಷ್ಟ ರೂ.2. ಲಕ್ಷ ನಷ್ಟವಾಗಿದ್ದರೆ ಅಂತಹ ವಿಶೇಷ/ದುರ್ಬಲ ವರ್ಗದ ಫಲಾನುಭವಿಗಳಿಗೆ ಸಾಂತ್ವನ ಯೋಜನೆಯಡಿ ಗರಿಷ್ಟ ರೂ.5 ಲಕ್ಷಗಳ ಘಟಕ ವೆಚ್ಚಕ್ಕೆ ಶೇಕಡಾ 50 ರಷ್ಟು ಸಹಾಯಧನ ಮತ್ತು ಶೇ.3ರ ಬಡ್ಡಿ ದರದಲ್ಲಿ ಶೇಕಡಾ 50 ರಷ್ಟು ಸಾಲವನ್ನು ನೀಡಲಾಗುತ್ತದೆ.

5) ಸಿಖ್ಖರ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹ: ಈ ಯೋಜನೆಯಡಿ ಸಿಖ್ ಧರ್ಮಕ್ಕೆ ಸೇರಿದ ಸಿಖ್ಖ್‍ಲಿಗಾರ್ ಸಮುದಾಯದ ಜನರು ಹಾಗೂ ಅವರ ಕುಟುಂಬಗಳು Iron ware Welding/ Fabricators ಕೂಲಿ ಕೆಲಸವನ್ನು ನಿರ್ವಹಿಸುತ್ತಿದ್ದು ಸದರಿ ಸಮುದಾಯದ ಜನರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ ನಿಗಮದಿಂದ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ರೂ.50 ಸಾವಿರ  ಸಾಲ ಮತ್ತು ರೂ.50 ಸಾವಿರ ಸಹಾಯಧನವನ್ನು ಶೇಕಡಾ 4% ಬಡ್ಡಿ ದರದಲ್ಲಿ ಮತ್ತು ಗೂಡ್ಸ್ ಟೆಂಪೋ/ವಾಹನ ಖರೀದಿಸಲು ವಾಹನ ಮೊತ್ತದ ಶೇ.33% (ಗರಿಷ್ಟ ರೂ.1.50 ಲಕ್ಷ) ಸಹಾಯಧನ ಒದಗಿಸಲಾಗುತ್ತದೆ. ಒಂದು ವೇಳೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್/ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆಯುವುದಾದಲ್ಲಿ ನಿಗಮದಿಂದ ಶೇ.33% (ಗರಿಷ್ಟ ರೂ.1 ಲಕ್ಷ) ಸಹಾಯಧನ ಒಗದಿಸಲಾಗುತ್ತದೆ.

6) ಗಂಗಾಕಲ್ಯಾಣ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತ ವರ್ಗಗಳ ಸೇರಿದ ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿರುವ ಒಂದೇ ಕಡೆ ಕನಿಷ್ಠ 1 ಎಕರೆಯಿಂದ 5 ಎಕ್ರೆವರೆಗಿನ ಕೃಷಿ ಜಮೀನು ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಳವೆಬಾವಿ ಕೊರೆಯುವಿಕೆ, ಪಂಪ್‍ಸೆಟ್ ಸರಬರಾಜು ಮತ್ತು ವಿದ್ಯುದ್ದೀಕರಣ ಠೇವಣಿ ಮೊತ್ತವನ್ನು ಸೇರಿ ರೂ.3 ಲಕ್ಷ ನಿಗಮದಿಂದ ಸಹಾಯಧನ ನೀಡಲಾಗುತ್ತದೆ. ವಿದ್ಯುದ್ದೀಕರಣ ಠೇವಣಿ ಮೊತ್ತ ರೂ.75 ಸಾವಿರವನ್ನು ನಿಗಮದಿಂದ ನೇರವಾಗಿ ಸಂಬಂಧಪಟ್ಟ ಎಸ್ಕಾಂಗಳಿಗೆ ಪಾವತಿಸಲಾಗುತ್ತದೆ.

7) ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮ ಪ್ರೋತ್ಸಾಹ ಯೋಜನೆ: ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳನ್ನು ಪ್ರೋತ್ಸಾಹಿಸಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವ ಸಲುವಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಅಗತ್ಯವಿರುವ ದುಡಿಯುವ ಬಂಡವಾಳ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ನಿಗಮದಿಂದ ರೂ.2 ಲಕ್ಷದವರೆಗೆ ಸಾಲ ಶೇಕಡಾ 50%ರಷ್ಟು ಸಹಾಯಧನವನ್ನು ಶೇಕಡಾ 4%ರ ಬಡ್ಡಿ ದರದಲ್ಲಿ ಒಗದಿಸಲಾಗುತ್ತದೆ. ಅರ್ಜಿದಾರರನ್ನು ಅರ್ಹತೆಯನುಸಾರ ರೇಷ್ಮೆ ಇಲಾಖೆ ಜೊತೆ ಸಮಾಲೋಚಿಸಿ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ.

error: Content is protected !!
Scroll to Top