(ನ್ಯೂಸ್ ಕಡಬ) newskadaba.com, ಆ.24 ಉಡುಪಿ: ಖ್ಯಾತ ಗಾಯಕಿ, ಆಕಾಶವಾಣಿಯ ಉನ್ನತ ದರ್ಜೆಯ ಕಲಾವಿದೆ ವಿದುಷಿ ಸಂಗೀತಾ ಬಾಲಚಂದ್ರ ಅವರು 25 ಗಂಟೆಗಳ ಕಾಲ ನಿರಂತರವಾಗಿ ಏಕವ್ಯಕ್ತಿ ದಾಸರಪದ ಗಾಯನ ‘ಪಂಚವಿಶಂತಿ’ ಮ್ಯಾರಥಾನ್ ಪೂರ್ಣಗೊಳಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.
ಆಗಸ್ಟ್ 23ರ ಬೆಳಿಗ್ಗೆ 6.30ಕ್ಕೆ ಉಡುಪಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನರಸಿಂಹ ಸಭಾಂಗಣದಲ್ಲಿ ಪ್ರಾರಂಭವಾದ ಈ ಗಾಯನ ಯಜ್ಞವು ಆಗಸ್ಟ್ 24ರ ಬೆಳಿಗ್ಗೆ 7.40ಕ್ಕೆ ಮುಕ್ತಾಯಗೊಂಡಿತು.25 ಗಂಟೆಗಳ ಕಾಲ ನಿರಂತರವಾಗಿ ಹರಿದಾಸರ 250 ದಾಸರಪದಗಳನ್ನು ಭಕ್ತಿಪೂರ್ವಕವಾಗಿ ಪ್ರಸ್ತುತಪಡಿಸಲಾಯಿತು.
ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಸಲಹೆಯಂತೆ, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ವಿದುಷಿ ಸಂಗೀತಾ ಅವರಿಗೆ ‘ಗೀತ ಗಂಗೋತ್ರಿ’ ಬಿರುದು ನೀಡಿ ಗೌರವಿಸಿದರು.ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಶ್ನೋಯಿ ಅವರು ಈ ಸಾಧನೆಯನ್ನು ವಿಶ್ವದಾಖಲೆ ಎಂದು ಘೋಷಿಸಿ ಪ್ರಮಾಣಪತ್ರ ಹಸ್ತಾಂತರಿಸಿದರು.ಭಕ್ತಿ ಸಂಗೀತ ಕ್ಷೇತ್ರಕ್ಕೆ ಉಡುಪಿಯ ಈ ಸಾಂಸ್ಕೃತಿಕ ಮೈಲಿಗಲ್ಲು ಹೊಸ ಹೆಮ್ಮೆಯನ್ನು ತಂದಿದೆ.








