(ನ್ಯೂಸ್ ಕಡಬ) newskadaba.com, ಆ.22: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗೇರುಕಟ್ಟೆ ಸಮೀಪದ ಸಂಭೋಳ್ಯ ನಿವಾಸಿ, 15 ವರ್ಷದ ವಿದ್ಯಾರ್ಥಿ ಸುಮಂತ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪ್ರಕರಣದ ಸತ್ಯಾಸತ್ಯತೆ ಹೊರತರಲು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಬ್ರೈನ್ ಮ್ಯಾಪಿಂಗ್ ಹಾಗೂ ನಾರ್ಕೋ ಅನಾಲಿಸಿಸ್ ಪರೀಕ್ಷೆಗಳನ್ನು ಪ್ರಾರಂಭಿಸಲಾಗಿದೆ.
ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಸುಮಂತ್, 2026ರ ಜನವರಿ 14ರಂದು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ನಿಗೂಢವಾಗಿ ಮೃತಪಟ್ಟಿದ್ದರು.ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ.
ಮೊದಲ ಹಂತದ ತನಿಖೆಗಾಗಿ ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ, ಸಹೋದರ ಸುದರ್ಶನ, ಮಾವ ರಾಧಾಕೃಷ್ಣ ಹಾಗೂ ಸಂಬಂಧಿ ಲಕ್ಷ್ಮೀನಾರಾಯಣ ಅವರನ್ನು ಬೆಂಗಳೂರಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.ಕುಟುಂಬಸ್ಥರು ನೀಡಿರುವ ಉತ್ತರಗಳನ್ನು ತನಿಖಾ ಮಾಹಿತಿಯೊಂದಿಗೆ ತಜ್ಞರು ಹೋಲಿಸಿ ವಿಶ್ಲೇಷಿಸುತ್ತಿದ್ದಾರೆ. ಮುಂದಿನ ಹಂತದ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಪ್ರಕರಣದ ಇತರ ಶಂಕಿತರನ್ನೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.








