(ನ್ಯೂಸ್ ಕಡಬ) newskadaba.com, ಆ .05: ರಾಜ್ಯದ ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ‘ಋತುತಾರೆ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.
ಮಹಿಳೆಯರು ಎದುರಿಸುತ್ತಿರುವ ಮಾನಸಿಕ ಒತ್ತಡ ಹಾಗೂ ಮೆನೋಪಾಸ್ (ಋತುಬಂಧ) ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹಿಳಾ ವೈದ್ಯಕೀಯ ತಜ್ಞೆ ಡಾ. ಜೋಸ್ನಾ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ. ಈ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ.
ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಮಹಿಳೆಯರ ಆರೋಗ್ಯದ ಕುರಿತು ಡೇಟಾ ಸಂಗ್ರಹಿಸಲಿದ್ದಾರೆ.ಪ್ರೀ-ಮೆನೋಪಾಸ್ ಹಾಗೂ ಪೋಸ್ಟ್-ಮೆನೋಪಾಸ್ ಹಂತಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಜೀವನಶೈಲಿ ಮತ್ತು ಚಿಕಿತ್ಸೆ ಬಗ್ಗೆ ಮಹಿಳೆಯರಿಗೆ ಸಮಗ್ರ ತಿಳಿವಳಿಕೆ ನೀಡಲಾಗುತ್ತದೆ.
ಮೆನೋಪಾಸ್ ಕುರಿತು ಸೂಕ್ತ ಕ್ರಮಕ್ಕೆ ನಟಿ ರಮ್ಯಾ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಸಚಿವ ಯು.ಟಿ. ಖಾದರ್, ನಟಿ ರಮ್ಯಾ ಹಾಗೂ ವೈದ್ಯಕೀಯ ತಜ್ಞರು ನಡೆಸಿದ ಸುದೀರ್ಘ ಸಂವಾದದಲ್ಲಿ ಬಂದ ಸಲಹೆಗಳ ಆಧಾರದ ಮೇಲೆ ಸರ್ಕಾರ ಈ ಪ್ರಮುಖ ನಿರ್ಧಾರ ಕೈಗೊಂಡಿದೆ.








