(ನ್ಯೂಸ್ ಕಡಬ) newskadaba.com ಕಡಬ, ಆ.02. ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯ ರೋಡ್ – ಸಕಲೇಶಪುರ ರೈಲು ಮಾರ್ಗದ ಶಿರಾಡಿ ಘಾಟ್ ನಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಭಾನುವಾರದಂದು ಸುಬ್ರಹ್ಮಣ್ಯ ರೋಡ್ ಮೂಲಕ ಬೆಂಗಳೂರಿಗೆ ತೆರಳುವ ಎಲ್ಲಾ ರೈಲು ಸಂಚಾರ ಸ್ಥಗಿತಗೊಂಡಿದೆ.
ಮೈಸೂರು ವಿಭಾಗದ ಎಡಕುಮೇರಿ ಮತ್ತು ಸಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಗಳ ಮೇಲೆ ಶನಿವಾರ ರಾತ್ರಿ ಸುಮಾರು 8:45 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಇದರ ಪರಿಣಾಮ 7 ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಅರ್ಧದಲ್ಲೇ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
16585 SMVT ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಪ್ರಯಾಣವನ್ನು ಹಾಸನದಲ್ಲಿ ಅಂತ್ಯಗೊಳಿಸಲಾಗಿದ್ದು,
16511 KSR ಬೆಂಗಳೂರು – ಕೋಝಿಕೋಡ್ ಎಕ್ಸ್‌ಪ್ರೆಸ್ ರೈಲನ್ನು ಹಾಸನದಲ್ಲಿ ನಿಲ್ಲಿಸಲಾಗಿದೆ. 17377 ವಿಜಯಪುರದಿಂದ ಮಂಗಳೂರು ಸೆಂಟ್ರಲ್ ಕಡೆಗೆ ಶನಿವಾರದಂದು ಹೊರಟ ಎಕ್ಸ್‌ಪ್ರೆಸ್ ರೈಲನ್ನು ಹಾಸನದಲ್ಲಿ ತಡೆಹಿಡಿಯಲಾಗಿದೆ. 16595 KSR ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್:ಮ ರೈಲು ಪ್ರಯಾಣವನ್ನು ಸಕಲೇಶಪುರದಲ್ಲಿ ಅಂತ್ಯಗೊಳಿಸಲಾಗಿದ್ದು,
16586 ಮುರುಡೇಶ್ವರದಿಂದ ಹೊರಟ SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಪ್ರಯಾಣ ಅಂತ್ಯಗೊಳಿಸಲಾಗಿದೆ.
16512 ಕೋಝಿಕೋಡ್ ನಿಂದ ಹೊರಟ KSR ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಕಬಕ ಪುತ್ತೂರಿನಲ್ಲಿ ನಿಲ್ಲಿಸಲಾಗಿದ್ದು, ಇದರಿಂದಾಗಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.
ಈ ನಡುವೆ ಶನಿವಾರದಂದು ಕಾರವಾರದಿಂದ ಹೊರಟ 16596 ಕಾರವಾರ ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲನ್ನು ಸಕಲೇಶಪುರ – ಹಾಸನ – ಕುಣಿಗಲ್ ಮಾರ್ಗದ ಬದಲಾಗಿ ಮಂಗಳೂರು ಜಂಕ್ಷನ್ – ಶೋರನೂರು – ಪಾಲಕ್ಕಾಡ್ – ಈರೋಡ್ ಮೂಲಕ ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಚರಿಸಿತು.
ದಕ್ಷಿಣ ಪಶ್ಚಿಮ ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಭಾರಿ ಮಳೆಯಿಂದ ನಿರಂತರವಾಗಿ ಭೂಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಹಿಟಾಚಿ ಯಂತ್ರಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಹಳಿ ಪುನಃಸ್ಥಾಪನೆ ಕಾರ್ಯವನ್ನು ತ್ವರಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ರೈಲು ಸಂಚಾರದ ಮುಂದಿನ ಬದಲಾವಣೆಗಳ ಕುರಿತು ಅಧಿಕೃತವಾಗಿ ಮಾಹಿತಿ ನೀಡಲಾಗುವುದು ಎಂದು ರೈಲ್ವೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.












