ಬಂಟ್ವಾಳ: ಶಾಲಾ ಬಸ್ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ – ಅಪಾಯಕಾರಿ ಮರಗಳ ಕೊಂಬೆ ತೆರವು

(ನ್ಯೂಸ್‌ ಕಡಬ) newskadaba.com,  ಜು.25:ಬರಿಮಾರು ಗ್ರಾಮದ ಕಲ್ಲೆಟ್ಟಿ ಬಳಿ ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ಮೃತಪಟ್ಟ ಭೀಕರ ದುರಂತದ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಬಂಟ್ವಾಳ ಪಟ್ಟಣ ಹಾಗೂ ಬಿ.ಸಿ.ರೋಡ್ ಸುತ್ತಮುತ್ತಲಿನ ರಸ್ತೆಬದಿಯ ಅಪಾಯಕಾರಿ ಮರಗಳು ಮತ್ತು ಚಾಚಿಕೊಂಡಿದ್ದ ಬೃಹತ್ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಆರಂಭಗೊಂಡಿದೆ.

ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಆವರಣ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸಲಾಗಿದೆ.ಕಾರ್ಯಾಚರಣೆಯ ವೇಳೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಂಚಯಗಿರಿ ಸೇರಿದಂತೆ ಕೆಲವು ಭಾಗಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು.

ಇಲಾಖೆಯ ಈ ತಕ್ಷಣದ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, ಇನ್ನುಳಿದ ಅಪಾಯಕಾರಿ ಮರಗಳನ್ನು ಶೀಘ್ರವಾಗಿ ಗುರುತಿಸಿ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ.

Scroll to Top