ತಮ್ಮನ ಕೊಲೆ ಮಾಡಿ ಪೊದೆಯಲ್ಲಿ ಅಡಗಿದ್ದ ಅಣ್ಣ



(ನ್ಯೂಸ್‌ ಕಡಬ) newskadaba.com,  ಜು .21 ಮಂಗಳೂರು: ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವಿಚಾರಕ್ಕೆ ಉಂಟಾದ ಜಗಳದಿಂದಾಗಿ ಮಲಗಿದ್ದ ಸ್ವಂತ ತಮ್ಮನನ್ನೇ ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.







ಬಂಧಿತ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದ, ಪ್ರಸ್ತುತ ಮಂಗಳೂರಿನ ಚೊಕ್ಕಬೆಟ್ಟು ನಿವಾಸಿ ಸೋಮನಾಥ (21) ಎಂದು ಗುರುತಿಸಲಾಗಿದೆ.






ಜುಲೈ 19ರಂದು ರಾತ್ರಿ ಸುಮಾರು 11:00 ಗಂಟೆಗೆ ಕಿರಿಯ ಸಹೋದರ ಮಲ್ಲಿಕಾರ್ಜುನ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅಣ್ಣ ಸೋಮನಾಥ ಅದನ್ನು ವಿರೋಧಿಸಿದ್ದಾನೆ. ಈ ವೇಳೆ ಮಲ್ಲಿಕಾರ್ಜುನ ನೀಡಿ ಉಡಾಫೆಯ ಉತ್ತರದಿಂದ ಕೋಪಗೊಂಡ ಸೋಮನಾಥ, ತಮ್ಮ ಮಲಗಿದ ನಂತರ ಮನೆಯಲ್ಲಿದ್ದ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಯು ಕೃಷ್ಣಾಪುರ ಮಠ ರಸ್ತೆಯ ಬಳಿಯ ಪೊದೆಯಲ್ಲಿ ಅವಿತುಕೊಂಡಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.ಸದ್ಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ BNS ಕಲಂ 103(1) ರಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

error: Content is protected !!
Scroll to Top