(ನ್ಯೂಸ್ ಕಡಬ) newskadaba.com, ಜು.20 ಉಡುಪಿ: ಉಡುಪಿ, ಕಾಪು, ಮಣಿಪಾಲ ಮತ್ತು ಕಾರ್ಕಳ ಪರಿಸರದಲ್ಲಿ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಉಡುಪಿ ಪೊಲೀಸರು ಪತ್ತೆಹಚ್ಚಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ವಿಜಯ ಪೂಜಾರಿ (36, ಪಿತ್ರೋಡಿ ಉದ್ಯಾವರ), ಪಿ. ಎ. ಮೊಹಮ್ಮದ್ ಸಮ್ಮಾಸ್ (24, ಕುಕ್ಕುಂದೂರು), ಮತ್ತು ಆಕಾಶ್ ಶೆಟ್ಟಿ (20, ಮಿಯಾರು ಕಾರ್ಕಳ).
ಶಿವಳ್ಳಿ ಗ್ರಾಮದಲ್ಲಿ ನಡೆಸಿದ ಈ ದಾಳಿಯ ವೇಳೆ ಆರೋಪಿಗಳಿಂದ 4 ಗ್ರಾಂ ಎಂಡಿಎಂಎ ಪುಡಿ, 2.5 ಗ್ರಾಂ ಹೈಡ್ರೋ ಗಾಂಜಾ, 3.65 ಗ್ರಾಂ ಎಂಡಿಎಂಎ ಮಾತ್ರೆಗಳು, 3 ಗ್ರಾಂ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 3,31,500 ರೂ. ಎಂದು ಅಂದಾಜಿಸಲಾಗಿದೆ.
ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ. ಯು. ಅವರ ಮಾರ್ಗದರ್ಶನದಲ್ಲಿ, ಮಲ್ಪೆ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದ ತಂಡ ಈ ಯಶಸ್ವಿ ದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ ಉಡುಪಿ ಟ್ರಾಫಿಕ್ ಪಿಎಸ್‌ಐ ಮಹೇಶ್ ಟಿ.ಎಂ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.ಬಂಧಿತರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.









