ಸುಳ್ಯ ಸರ್ಕಾರಿ ಆಸ್ಪತ್ರೆ ಆಹಾರ ವಿತರಣೆ ವಿವಾದ: ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ



(ನ್ಯೂಸ್‌ ಕಡಬ) newskadaba.com,   ಜು.14 : ಸುಳ್ಯ ತಾಲೂಕು ಆಸ್ಪತ್ರೆಯ ಆಹಾರ ವಿತರಣೆಯಲ್ಲಿ ತಾರತಮ್ಯ ಆರೋಪ: ಸಿಎಂಗೆ ಡಯಾಲಿಸಿಸ್ ರೋಗಿಗಳು, ಸಿಬ್ಬಂದಿಯಿಂದ ದೂರುಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳು ಹಾಗೂ ಡಯಾಲಿಸಿಸ್ ರೋಗಿಗಳಿಗೆ ವಿತರಿಸಲಾಗುತ್ತಿರುವ ಆಹಾರದಲ್ಲಿ ತಾರತಮ್ಯ, ಆಹಾರ ದುರುಪಯೋಗ ಹಾಗೂ ಕರ್ತವ್ಯ ಲೋಪ ನಡೆಯುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಆಹಾರ ತಯಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಡಯಾಲಿಸಿಸ್ ರೋಗಿಗಳು ಮತ್ತು ಸಿಬ್ಬಂದಿ ವರ್ಗದವರು ದೂರು ಸಲ್ಲಿಸಿದ್ದಾರೆ.







ಆಸ್ಪತ್ರೆಯ ಮುಖ್ಯಸ್ಥರು ಅಗತ್ಯವಿರುವ ಡಯಾಲಿಸಿಸ್ ರೋಗಿಗಳು ಹಾಗೂ ಸಿಬ್ಬಂದಿಗೆ ಆಹಾರ ವಿತರಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. ಕೆಲವರಿಗೆ ಮಾತ್ರ ವಿಶೇಷವಾಗಿ ಆಹಾರ ನೀಡಲಾಗುತ್ತಿದ್ದು, ಉಳಿದ ಆಹಾರವನ್ನು ಅಗತ್ಯವಿರುವವರಿಗೆ ವಿತರಿಸದೆ ಕಸದ ಬುಟ್ಟಿಗೆ ಎಸೆಯಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.






ಇದೇ ವೇಳೆ, ರೋಗಿಗಳ ಪೌಷ್ಟಿಕಾಂಶಕ್ಕಾಗಿ ಸರ್ಕಾರದಿಂದ ಒದಗಿಸಲಾಗುವ ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ಅರ್ಹ ರೋಗಿಗಳಿಗೆ ನೀಡದೆ, ಆಯ್ದ ಸಿಬ್ಬಂದಿಗಳಿಗೆ ಮಾತ್ರ ಹಂಚಲಾಗುತ್ತಿದೆ ಎಂಬ ಆರೋಪವೂ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಕ್ಷಣ ಮಧ್ಯಪ್ರವೇಶಿಸಿ, ಆಸ್ಪತ್ರೆಯ ಮುಖ್ಯಸ್ಥರ ಸೂಚನೆಯನ್ನು ಪಾಲಿಸದೆ ತಾರತಮ್ಯ ಹಾಗೂ ಆಹಾರದುರುಪಯೋಗ ಎಸಗುತ್ತಿರುವುದಾಗಿ ಆರೋಪಿಸಲಾದ ಆಹಾರ ತಯಾರಕರ ವಿರುದ್ಧ ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ನೊಂದ ಡಯಾಲಿಸಿಸ್ ರೋಗಿಗಳು ಮತ್ತು ಸಿಬ್ಬಂದಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

error: Content is protected !!
Scroll to Top