(ನ್ಯೂಸ್ ಕಡಬ) newskadaba.com ಜು. 13. ಶಿಕ್ಷಕಿಯೊರ್ವರು ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಎಂಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯನ್ನು ಶ್ವೇತಾ(25) ಎಂದು ಗುರುತಿಸಲಾಗಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶ್ವೇತಾ, ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ನಾಲ್ಕು ತಿಂಗಳ ಹಿಂದೆ ಕುಣಿಗಲ್ ಮೂಲದ, ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂರ್ತಿ ಎಂಬಾತನನ್ನು ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಇದೀಗ ಶಿಕ್ಷಕಿ ದುರಂತ ಅಂತ್ಯ ಕಂಡಿದ್ದಾರೆ.
ಮೃತಳ ತಾಯಿ ಪುಷ್ಪಾ ಅವರ ಹೇಳಿಕೆಯ ಪ್ರಕಾರ, ಆರೋಪಿ ಮೂರ್ತಿ ಹಾಗೂ ಆತನ ಅಕ್ಕ ಹಣಕ್ಕಾಗಿ ಶ್ವೇತಾಗೆ ಪ್ರತಿದಿನ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಶ್ವೇತಾ ಅವರ ಅಕ್ಕಂದಿರ ಮದುವೆಯಂತೆ ತಮಗೂ ಹಣ ನೀಡಬೇಕೆಂದು ಪೀಡಿಸುತ್ತಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಶ್ವೇತಾ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಪತಿ ಮತ್ತು ಆತನ ಅಕ್ಕ ನೀಡುತ್ತಿದ್ದ ಹಿಂಸೆಯ ಬಗ್ಗೆ ಉಲ್ಲೇಖಿಸಿ, “ನನ್ನ ಸಾವಿಗೆ ಕಾರಣರಾದ ಇವರನ್ನು ಸುಮ್ಮನೆ ಬಿಡಬೇಡಿ” ಎಂದು ಬರೆದಿದ್ದಾರೆ. ಕಿರುಕುಳ ತಾಳಲಾರದೆ ಪಿಜಿಗೆ (PG) ಹೋಗುವಂತೆ ತಾಯಿ ಧೈರ್ಯ ತುಂಬಿದ್ದರೂ, ಅದಕ್ಕೂ ಮುನ್ನವೇ ಶ್ವೇತಾ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿಯ ದೂರಿನ ಮೇರೆಗೆ ಪೊಲೀಸರು ಪತಿ ಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.













