(ನ್ಯೂಸ್ ಕಡಬ) newskadaba.com ಜು. 13. 6 ವರ್ಷದ ಮೊಮ್ಮಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಲಾಯಿಸಲು ಬಿಟ್ಟ ಸಬ್ಇನ್ಸ್ಪೆಕ್ಟರ್ (ಎಸ್ಐ) ಪೂಜಾರಿ ತಿರುಪತಿ ಅವರನ್ನು ಅಮಾನತುಗೊಳಿಸಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಬಾಲಕಿ ಕಾರು ಚಲಾಯಿಸಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದಾಗ, ಎಸ್ಐ ತಿರುಪತಿ ಅವರು “ಇದು ನನ್ನ ವೈಯಕ್ತಿಕ ನಿರ್ಧಾರ, ಪ್ರಶ್ನಿಸಲು ನೀವ್ಯಾರು?” ಎಂದು ಉದ್ಧಟತನದ ಪ್ರತಿಕ್ರಿಯೆ ನೀಡಿದ್ದರು ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಅದು ಆಟೋಮ್ಯಾಟಿಕ್ ಕಾರಾಗಿದ್ದರಿಂದ ನಿಯಂತ್ರಣ ತಮ್ಮ ಕೈಯಲ್ಲೇ ಇತ್ತೆಂದೂ, ಗಿನ್ನಿಸ್ ದಾಖಲೆಗಾಗಿ ಮೊಮ್ಮಗಳಿಗೆ ತರಬೇತಿ ನೀಡುತ್ತಿರುವುದಾಗಿಯೂ ಎಸ್ಐ ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನರಸಿಂಗಿ ಪೊಲೀಸರು ಎಸ್ಐ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 125 (ಜೀವಕ್ಕೆ ಅಪಾಯ ತರುವುದು) ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 180 ಮತ್ತು 184 ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಡಿಜಿಪಿ ಸಿ.ವಿ. ಆನಂದ್ ಅವರು, ಆರೋಪಿ ಎಸ್ಐ ಅವರನ್ನು ತಕ್ಷಣವೇ ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸುವಂತೆ ಸೈಬರಾಬಾದ್ ಪೊಲೀಸ್ ಕಮಿಷನರ್ ಗೆ ಆದೇಶಿಸಿದ್ದಾರೆ.













