ಬ್ಯಾಂಕಿನ ಮೇಲ್ಛಾವಣಿ ಕತ್ತರಿಸಿ ಒಳನುಗ್ಗಿದ ಕಳ್ಳರು ನಗದು, ವಸ್ತುಗಳು ಸುರಕ್ಷಿತ!

(ನ್ಯೂಸ್ ಕಡಬ) newskadaba.com ಜು. 13. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯ ಮಿನೇಜಸ್ ಪ್ಲಾಜಾ ಕಾಂಪ್ಲೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾನುವಾರದಂದು ತಡರಾತ್ರಿ ಕಳ್ಳತನ ಯತ್ನ ನಡೆದಿದ್ದು, ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿಯ ವೇಳೆ ಬ್ಯಾಂಕಿಗೆ ನುಗ್ಗಿದ ಕಳ್ಳರು, ಮೇಲ್ಛಾವಣಿಯನ್ನು ತುಂಡರಿಸಿ ಒಳಗಡೆ ಪ್ರವೇಶಿಸಿದ್ದಾರೆ. ಸೋಮವಾರದಂದು ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿಗಳು ಎಮದಿನಂತೆ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಬ್ಯಾಂಕ್ ಅಧಿಕಾರಿಗಳು ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು, ಬೆರಳಚ್ಚು ತಜ್ಞರ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬ್ಯಾಂಕಿನಿಂದ ಯಾವುದೇ ಬೆಲೆಬಾಳುವ ವಸ್ತುಗಳು ಅಥವಾ ನಗದು ಕಳ್ಳತನವಾಗಿಲ್ಲ ಎಂಬುದು ಖಚಿತಪಟ್ಟಿದೆ. ರಾಜ್ಯದಲ್ಲಿ ಇತ್ತೀಚೆಗಷ್ಟೇ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ಲ್ಯಾಬ್ಗಳಿಗೆ ಚಾಲನೆ ನೀಡಲಾಗಿದ್ದು, ಇಂತಹ ಅಪರಾಧ ಕೃತ್ಯಗಳ ಪತ್ತೆಗೆ ತಾಂತ್ರಿಕ ನೆರವು ಮತ್ತಷ್ಟು ಬಲವರ್ಧನೆಗೊಂಡಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಪರಿಶೀಲನೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

Scroll to Top