(ನ್ಯೂಸ್ ಕಡಬ) newskadaba.com, ಜು.04 ಸಮುದ್ರದಲ್ಲಿ ನೀರು ತುಂಬಿಕೊಂಡು ಅಪಘಾತಕ್ಕೀಡಾಗಿದ್ದ ಮಲ್ಪೆ ನೋಂದಣಿಯ ‘ಮಂಜು ಮಾತಾ’ ಎಂಬ ಗಿಲ್‌ನೆಟ್ ಮೀನುಗಾರಿಕಾ ದೋಣಿಯು ಶುಕ್ರವಾರ ಸಂಜೆ ಉಚ್ಚಿಲ ಕಡಲತೀರಕ್ಕೆ ಕೊಚ್ಚಿಕೊಂಡು ಬಂದಿದ್ದು, ಸಾರ್ವಜನಿಕರ ಸಹಾಯದಿಂದ ದಡಕ್ಕೆ ಎಳೆಯಲಾಗಿದೆ.
ಜೂನ್ 29 ರಂದು ಮಲ್ಪೆ ಬಂದರಿನಿಂದ ತೆರಳಿದ್ದ ಈ ದೋಣಿಯ ತಳಭಾಗದಲ್ಲಿ ಸೋರಿಕೆ ಕಂಡುಬಂದು ನೀರು ನುಗ್ಗಿದ್ದರಿಂದ ಅಪಘಾತಕ್ಕೀಡಾಗಿತ್ತು.ಭಾರತೀಯ ಕರಾವಳಿ ಕಾವಲು ಪಡೆಯು ತಕ್ಷಣ ಕಾರ್ಯಪ್ರವೃತ್ತರಾಗಿ ದೋಣಿಯಲ್ಲಿದ್ದ ಆರೂ ಜನ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿತ್ತು. ಆದರೆ ದೋಣಿಯನ್ನು ಮೇಲೆತ್ತಲಾಗದೆ ಸಮುದ್ರದಲ್ಲೇ ಬಿಡಲಾಗಿತ್ತು.
ಜಿಲ್ಲಾಡಳಿತ ವಿಧಿಸಿದ್ದ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಈ ದೋಣಿ ಸಮುದ್ರಕ್ಕೆ ತೆರಳಿ ನಿಯಮ ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ನಿಯಮ ಉಲ್ಲಂಘಿಸಿದ ದೋಣಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹಾಗೂ ದೋಣಿಯ ಪರವಾನಗಿ ಮತ್ತು ನೋಂದಣಿಯನ್ನು ರದ್ದುಗೊಳಿಸಲು ಮೀನುಗಾರಿಕಾ ಇಲಾಖೆಗೆ ವರದಿ ಸಲ್ಲಿಸಲಾಗಿದೆ.









