ತಾಯಿಯ ಮನೆಯಿಂದ ಪತ್ನಿಯನ್ನು ಕರೆದೊಯ್ದ ಪತಿ: ಅತ್ತೆ ದಾಖಲಿಸಿದ್ದ ಅಪಹರಣ ಪ್ರಕರಣಕ್ಕೆ ಹೈಕೋರ್ಟ್ ತಡೆ

(ನ್ಯೂಸ್‌ ಕಡಬ) newskadaba.com,  ಜೂ.25 ಬೆಂಗಳೂರು: ತಾಯಿಯ ಮನೆಯಲ್ಲಿದ್ದ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋದ ಪತಿಯ ವಿರುದ್ಧ ಅತ್ತೆ ದಾಖಲಿಸಿದ್ದ ಅಪಹರಣ ಮತ್ತು ಮನೆ ಅತಿಕ್ರಮ ಪ್ರವೇಶ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ರಾಜಾಜಿನಗರದ ನಿವಾಸಿ ಜ್ಯೋತಿ ಎಂಬುವರು, ತನ್ನ ಮಗಳನ್ನು ಅಳಿಯ ಮುರಳಿ ಮತ್ತು ಆತನ ಸ್ನೇಹಿತರು ಅಪಹರಣ ಮಾಡಿದ್ದಾರೆ ಎಂದು 2026ರ ಫೆಬ್ರವರಿ 13ರಂದು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಎಫ್‌ಐಆರ್ ರದ್ದು ಕೋರಿ ಪತಿ ಮುರಳಿ ಮತ್ತು ಅವರ ಸ್ನೇಹಿತರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

“ಪತಿ-ಪತ್ನಿ ಈಗಾಗಲೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಸದ್ಯ ಒಂದೇ ಮನೆಯಲ್ಲಿ ಜೊತೆಯಾಗಿ ವಾಸಿಸುತ್ತಿದ್ದಾರೆ” ಎಂಬ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಮದುವೆಯಾದ ನಂತರವೂ ಅಪಹರಣ ಪ್ರಕರಣ ದಾಖಲಿಸಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿತು.ಪ್ರಸ್ತುತ ಕೋರ್ಟ್ ಮುಂದಿನ ಕಾನೂನು ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ದೂರುದಾರರಾದ ಅತ್ತೆ ಜ್ಯೋತಿ ಮತ್ತು ರಾಜಾಜಿನಗರ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

Scroll to Top