(ನ್ಯೂಸ್ ಕಡಬ) newskadaba.com, ಜೂ. 12 ಬೆಂಗಳೂರು: ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನ್ವಯ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಗರದಲ್ಲಿ ಬೀದಿ ನಾಯಿಗಳ ಕಲ್ಯಾಣ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ.
ಸಾರ್ವಜನಿಕರು ಅಥವಾ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳು ಸ್ವಯಂಪ್ರೇರಿತವಾಗಿ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತಿಲ್ಲ. ಕೇವಲ ಸ್ಥಳೀಯ ಸಂಸ್ಥೆಗಳ ನಿಯೋಜಿತ ಅಧಿಕಾರಿಗಳಿಗೆ ಮಾತ್ರ ಅಧಿಕೃತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವ ಅಧಿಕಾರವಿರುತ್ತದೆ.
ಬೀದಿ ನಾಯಿಗಳಿಗೆ ಕಲ್ಲು ಹೊಡೆಯುವುದು, ಕಿರುಕುಳ ನೀಡುವುದು ಅಥವಾ ಹಿಂಸಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ನಿಮ್ಮ ಬಡಾವಣೆಯಲ್ಲಿ ಅಧಿಕೃತ ಫೀಡಿಂಗ್ ಸ್ಪಾಟ್ ಅಗತ್ಯವಿದ್ದಲ್ಲಿ ಸಾರ್ವಜನಿಕರು ಪ್ರಾಧಿಕಾರದ ಸಹಾಯವಾಣಿ 1533ಕ್ಕೆ ಕರೆ ಮಾಡಿ ಮನವಿ ಸಲ್ಲಿಸಬಹುದು.
ಈ ಹೊಸ ನಿಯಮಗಳನ್ನು ಚಿತ್ರನಟಿ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ರಮ್ಯಾ ಅವರು ಸ್ವಾಗತಿಸಿದ್ದು, ಪ್ರಾಧಿಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಗರದಲ್ಲಿ ಸಾಮರಸ್ಯ ಕಾಪಾಡಲು ಸಾರ್ವಜನಿಕರು ಮತ್ತು ಆರ್‌ಡಬ್ಲ್ಯುಎಗಳು ಪರಸ್ಪರ ಸಹಕರಿಸಬೇಕೆಂದು ಪ್ರಾಧಿಕಾರದ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.









