(ನ್ಯೂಸ್ ಕಡಬ) newskadaba.com ಜೂ. 10. 2026-27ನೇ ಸಾಲಿನಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಆತ್ಮ ಯೋಜನೆಯ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಸಕ್ತ ಅರ್ಹ ರೈತರು/ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಬ್ಬ ಅರ್ಜಿದಾರರು ತಾನು ನಿರ್ವಹಿಸುವ ಒಂದು ಚಟುವಟಿಕೆಯಡಿ ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಬೇಕಾಗಿರುತ್ತದೆ. ಚಟುವಟಿಕೆಗಳ ಹೆಸರು ಈ ಕೆಳಗಿನಂತಿದೆ.
1)ಕೃಷಿಯಲ್ಲಿ ಸಮಗ್ರ ಕೃಷಿ ಪದ್ದತಿ, 2) ಸಮಗ್ರ ನೀರು ನಿರ್ವಹಣೆ, 3)ಸಾವಯವ ಕೃಷಿ ಅಭಿವೃದ್ದಿ, 4)ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, 5)ತೋಟಗಾರಿಕೆ, 6)ಹೈನುಗಾರಿಕೆ, 7)ಕೋಳಿ ಸಾಕಾಣಿಕೆ, 8)ಮೀನುಗಾರಿಕೆ, 9)ರೇಷ್ಮೆ ಬೇಸಾಯ, 10) ಹೈಟೆಕ್ ತಂತ್ರಜ್ಞಾನ ಅಳವಡಿಕೆ (ಹಸಿರು ಮನೆ, ಅಭಿವೃದ್ಧಿ, ಸಸ್ಯಕಾಶಿ, ಕೃಷಿ ಯಾಂತ್ರೀಕರಣ ಇತ್ಯಾದಿ), 11) ಕೃಷಿ ಸಂಸ್ಕರಣೆ, 12)ಅರಣ್ಯ ಕೃಷಿ, ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆ.
ಇವುಗಳಲ್ಲಿ ಯಾವುದಾದರೂ ಒಂದು ಚಟುವಟಿಕೆಗೆ ಮಾತ್ರ ಒಂದು ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಅರ್ಜಿಯೊಂದಿಗೆ ಸಂಬಂಧಪಟ್ಟ ಚಟುವಟಿಕೆಯ ಜೆರಾಕ್ಸ್ ಪ್ರತಿಗಳನ್ನು, ಫೋಟೋಗ್ರಾಫ್ ಗಳನ್ನು, ಖರ್ಚು ವೆಚ್ಚಗಳು, ವರಮಾನ, ಪತ್ರಿಕಾ ಪ್ರಕಟಣೆಗಳ ಮಾಹಿತಿ ಇತ್ಯಾದಿಗಳ ಪ್ರತಿ ಲಗತ್ತಿಸಬೇಕು. ಅಳವಡಿಸಿರುವ ತಾಂತ್ರಿಕತೆ ಪ್ರಸ್ತುತ ಸನ್ನಿವೇಶಕ್ಕೆ ಮತ್ತು ರೈತ ಸಮುದಾಯಕ್ಕೆ ಪ್ರೇರಣೆಗೆ ಮತ್ತು ಅಳವಡಿಕೆಗೆ ಸಹಕಾರಿಯಾಗುವಂತಿರಬೇಕು. ಕಳೆದ ಎರಡು ಸಾಲಿನಲ್ಲಿ ತಾಲೂಕು ಇಲ್ಲವೇ ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದವರು ಮುಂದಿನ ಹಂತದ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಒಂದು ಬಾರಿ ರಾಜ್ಯಮಟ್ಟದ ಶ್ರೇಷ್ಠ ಕೃಷಿಕ/ಕೃಷಿ ಪಂಡಿತ ಪ್ರಶಸ್ತಿ ಪಡೆದಿದ್ದಲ್ಲಿ ಪುನ: ಯಾವುದೇ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನ. ಆಸ್ತಕರು ನಿಗದಿತ ಅರ್ಜಿ ನಮೂನೆಯನ್ನು ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದು ಎಂದು ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ









