ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅನುಮಾನಾಸ್ಪದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

(ನ್ಯೂಸ್‌ ಕಡಬ) newskadaba.com,  ಜೂ.10  ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಸಣ್ಣ ಫ್ಲೈಓವರ್ ಬಳಿಯ ರಸ್ತೆಬದಿಯ ಚರಂಡಿಯಲ್ಲಿ ಬುಧವಾರ ಅಪರಿಚಿತ ಯುವಕನೊಬ್ಬನ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವಕ ಉತ್ತರ ಭಾರತ ಮೂಲದವನೆಂದು ಶಂಕಿಸಲಾಗಿದ್ದು, ಸದ್ಯಕ್ಕೆ ಗುರುತು ಪತ್ತೆಯಾಗಿಲ್ಲ.

ಶವ ಪತ್ತೆಯಾದ ಸ್ಥಳದಿಂದ ಕೇವಲ ಒಂದೂವರೆ ಮೀಟರ್ ದೂರದಲ್ಲಿರುವ ಮನೆಯೊಂದರ ಗೇಟ್ ಬಳಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದರಿಂದಾಗಿ ಯುವಕನನ್ನು ಬೇರೆಡೆ ಕೊಲೆ ಮಾಡಿ ತಂದು ಎಸೆದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪಣಂಬೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Scroll to Top