(ನ್ಯೂಸ್ ಕಡಬ) newskadaba.com, ಜೂ.06 ನವದೆಹಲಿ: ಭಾರತದ ಇಂಧನ ಸ್ವಾವಲಂಬನೆ ಮತ್ತು ಭದ್ರತೆಯ ಕನಸಿಗೆ ದಾರಿದೀಪವೆಂಬಂತೆ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದೆ. ಈ ಐತಿಹಾಸಿಕ ಮೈಲಿಗಲ್ಲು ಭವಿಷ್ಯದಲ್ಲಿ ವಿದೇಶಿ ಇಂಧನ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.
ಸರ್ಕಾರಿ ಸ್ವಾಮ್ಯದ ಪ್ರಮುಖ ಇಂಧನ ಸಂಸ್ಥೆಯಾದ ಆಯಿಲ್ ಇಂಡಿಯಾ ಲಿಮಿಟೆಡ್ ಈ ಮಹತ್ತರ ಪರಿಶೋಧನೆಯನ್ನು ಕೈಗೊಂಡಿದೆ. ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ‘ಶ್ರೀ ವಿಜಯಪುರಂ-3’ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಇರುವುದು ಅಧಿಕೃತವಾಗಿ ದೃಢಪಟ್ಟಿದೆ.
ಕೇಂದ್ರ ಪೆಟ್ರೋಲಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಆವಿಷ್ಕಾರವನ್ನು ಶ್ಲಾಘಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಸಮುದ್ರ ಮಂಥನ ಮಿಷನ್’ಗೆ ಸಿಕ್ಕ ಅತಿ ದೊಡ್ಡ ಯಶಸ್ಸು ಇದು ಎಂದು ಬಣ್ಣಿಸಿದ್ದಾರೆ..ಸದ್ಯಕ್ಕೆ ಅನಿಲದ ನಿಖರ ಪ್ರಮಾಣ ಮತ್ತು ವಾಣಿಜ್ಯಿಕ ಉತ್ಪಾದನೆಯ ಸಾಧ್ಯತೆಗಳ ಬಗ್ಗೆ ಇನ್ನಷ್ಟು ತಾಂತ್ರಿಕ ಅಧ್ಯಯನಗಳು ಪ್ರಗತಿಯಲ್ಲಿದ್ದು, ಇವೆಲ್ಲವೂ ಪೂರ್ಣಗೊಂಡ ಬಳಿಕ ಮುಂದಿನ ಹಂತದ ಉತ್ಪಾದನಾ ಪ್ರಕ್ರಿಯೆಗಳು ಅಧಿಕೃತವಾಗಿ ಚಾಲನೆ ಪಡೆಯಲಿವೆ.









