(ನ್ಯೂಸ್ ಕಡಬ) newskadaba.com, ಮೇ.14: ಚಲಿಸುತ್ತಿದ್ದ ಖಾಸಗಿ ಬಸ್ಸಿನೊಳಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯ ನಂಗ್ಲೋಯಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಬಸ್ ಡ್ರೈವರ್, ಕಂಡಕ್ಟರ್ ಇಬ್ಬರನ್ನು ಪೊಲಿಸರು ಬಂಧಿಸಿದ್ದಾರೆ.
ಬಸ್ಸಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ದೂರು ನೀಡಿದ್ದು, ದೂರಿನ ಆಧಾರ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಸ್ ಡ್ರೈವರ್, ಕಂಡಕ್ಟರ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಮೇ. 11 ರ ರಾತ್ರಿ 11 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಎಂದಿನಂತೆ ಕೆಲಸ ಮುಗಿಸಿ ಮಹಿಳೆ ದೆಹಲಿಯ ರಾಣಿಬಾಗ್ ಪ್ರದೇಶದ ಸರಸ್ವತಿ ವಿಹಾರ್ ಬಿ-ಬ್ಲಾಕ್ ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂದು ಸ್ಲೀಪರ್ ಬಸ್ ಪಕ್ಕದಲ್ಲಿ ನಿಂತಿತ್ತು. ಬಸ್ಸಿನ ಬಾಗಿಲ ಬಳಿ ನಿಂತಿದ್ದ ಕಂಡಕ್ಟರ್ ಬಳಿ ಮಹಿಳೆ ಸಮಯ ಕೇಳಲೆಂದು ಧಾವಿಸಿದ ವೇಳೆ ಆಕೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿದೆ.
ಘಟನೆ ವೇಳೆ ಸುಮಾರು 7 ಕಿ.ಮೀವರೆಗೆ ಬಸ್ ಚಲಿಸುತ್ತಲೇ ಇತ್ತು. ತಡರಾತ್ರಿ 2 ಗಂಟೆಯ ಸುಮಾರಿಗೆ ಮಹಿಳೆಯನ್ನು ಬಸ್ಸಿನಿಂದ ಹೊರದಬ್ಬಿದ್ದಾರೆ. ಪರಿಣಾಮ ಮಹಿಳೆಗೆ ಗಾಯಗಳಾಗಿವೆ. ಸದ್ಯ ಘಟನೆ ಕುರಿತು ಹೆಚ್ಚಿನ ತನಿಖೆಗಾಗಿ ಕೃತ್ಯಕ್ಕೆ ಬಳಸಿದ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.









