ಮಂಗಳೂರು: ಮೀನುಗಾರಿಕಾ ಬೋಟ್‌ಗಳಿಗೆ ನಿರಂತರ ಡೀಸೆಲ್, ಎಲ್‌ಪಿಜಿ ಪೂರೈಕೆಗೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ



(ನ್ಯೂಸ್‌ ಕಡಬ) newskadaba.com,  ಮಾ.02: ಸ್ಥಳೀಯ ಮೀನುಗಾರಿಕಾ ಬಂದರಿನಿಂದ ಹೊರಡುವ ಬೋಟ್‌ಗಳಿಗೆ ನಿರಂತರವಾಗಿ ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಸುವಂತೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅಧಿಕಾರಿಗಳು ಮತ್ತು ತೈಲ ಕಂಪನಿಗಳಿಗೆ ಸೂಚಿಸಿದ್ದಾರೆ..







ಮೀನುಗಾರಿಕಾ ಸಂಘಟನೆಗಳು, ಬೋಟ್ ಮಾಲಕರು, ತೈಲ ಕಂಪನಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂಧನ ಕೊರತೆಯಿಂದಾಗಿ ಮೀನುಗಾರಿಕಾ ಉದ್ಯಮಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದು ಹೇಳಿದರು.






ಮೀನುಗಾರಿಕಾ ಬೋಟುಗಳಿಗೆ ಡೀಸೆಲ್ ಕೊರತೆಯಾಗದಂತೆ ಸರಬರಾಜು ಮಾಡಬೇಕು. ಹಳೆ ಬಂದರಿನಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ (ಕೆಎಫ್‌ಡಿಸಿ) ಡೀಸೆಲ್ ಔಟ್‌ಲೆಟ್ ಪುನಃ ತೆರೆಯಬೇಕು. ಅಗತ್ಯವಾದ ಕೋಡ್ ಸಂಖ್ಯೆಯನ್ನು ತುರ್ತಾಗಿ ನೀಡುವಂತೆ ಮೀನುಗಾರಿಕೆ ನಿರ್ದೇಶಕರಿಗೆ ಸೂಚಿಸಿದರು.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಂತರ ಮೀನುಗಾರಿಕಾ ಬೋಟ್‌ಗಳಿಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಮೀನುಗಾರಿಕಾ ಬೋಟ್‌ಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಮೀನುಗಾರಿಕಾ ಉದ್ಯಮ ತೀರ ಸಮಸ್ಯೆ ಎದುರಿಸುತ್ತಿದೆ. ಡೀಸೆಲ್ ದರ ಹೆಚ್ಚಳದಿಂದ ಆಗುವ ನಷ್ಟವನ್ನು ಸರ್ಕಾರ ಭರಿಸಬೇಕು ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಒತ್ತಾಯಿಸಿದರು.

ಈಗಾಗಲೇ ಕೇಂದ್ರ ಸರ್ಕಾರದ ಸುತ್ತೋಲೆಯ ಅನ್ವಯ ವಿತರಣೆಯ ಶೇ.20ರಷ್ಟು ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಇಂದಿರಾ ಕ್ಯಾಂಟೀನ್, ರೆಸ್ಟೋರೆಂಟ್ ಮತ್ತು ಮೀನುಗಾರಿಕೆ ಮುಂತಾದವುಗಳು ಇರುವುದರಿಂದ ಆದ್ಯತೆಯಲ್ಲಿ ಪರಿಗಣಿಸಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುವುದಾಗಿ ತೈಲ ಕಂಪೆನಿಗಳ ಪ್ರತಿನಿಧಿಗಳು ತಿಳಿಸಿದರು.

ಸಮುದ್ರದಲ್ಲಿ ಮೀನುಗಾರರ ಅಡುಗೆ ಅಗತ್ಯಗಳಿಗಾಗಿ ಕನಿಷ್ಠ 130 ರಿಂದ 150 ಸಿಲಿಂಡರ್‌ಗಳನ್ನು ಲಭ್ಯವಾಗುವಂತೆ ಮಾಡಲು ಸಭಾಧ್ಯಕ್ಷರು ನಿರ್ದೇಶನ ನೀಡಿದರು. ಬಂದರು ಮೀನುಗಾರಿಕಾ ಧಕ್ಕೆಯಿಂದ ಹೊರಡುವ ಪ್ರತಿ ದೋಣಿಗೆ ಕನಿಷ್ಠ ಒಂದು ಸಿಲಿಂಡರ್ ಸಿಗುವಂತೆ ಕೆಎಫ್‌ಡಿಸಿ ಖಚಿತಪಡಿಸಿಕೊಳ್ಳಬೇಕು ಎಂದರು.ಮೀನುಗಾರರು ಮೀನುಗಾರಿಕೆಗೆ ತೆರಳುವಾಗ ಅಡುಗೆಗಾಗಿ ಕೊಂಡೊಯ್ಯುವ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿಯೂ ಯಾವುದೇ ಕೊರತೆಯಾಗದಂತೆ ಕನಿಷ್ಟ 130ರಿಂದ 150 ಸಿಲಿಂಡರ್‌ಗಳನ್ನು ಮೀನುಗಾರರಿಗೆ ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಬಂದರ್ ಮೀನುಗಾರಿಕಾ ದಕ್ಕೆಯಿಂದ ಹೊರಡುವ ಪ್ರತಿ ಬೋಟ್‌ಗೆ 1ರಂತೆ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಸಿಲಿಂಡರ್ ಒದಗಿಸುವಂತೆ ಖಾದರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಮಾತನಾಡಿ, ಪ್ರತಿ ಜಿಲ್ಲೆಗೆ ನೀಡುವ ಕೋಟಾದಲ್ಲಿ ಮೀನುಗಾರಿಕೆಗಾಗಿ 130ರಿಂದ 150 ಸಿಲಿಂಡರ್‌ಗಳನ್ನು ಮೀನುಗಾರರಿಗೆ ಒದಗಿಸಲು ಮತ್ತು ಈ ಬಗ್ಗೆ ಮೀನುಗಾರಿಕಾ ಅಧಿಕಾರಿಗಳು ತೈಲ ಕಂಪೆನಿಗಳೊಂದಿಗೆ ವ್ಯವಹರಿಸಲು ಸೂಚಿಸಿದರು.

ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ನಿಗಮವು ಈಗಾಗಲೇ ಡೀಸೆಲ್ ವಿತರಣಾ ಏಜೆನ್ಸಿಯನ್ನು ಹೊಂದಿದೆ. ಅಧಿಕೃತ ಕೋಡ್ ಸಂಖ್ಯೆ ಬಂದ ತಕ್ಷಣ, ಡೀಸೆಲ್ ಕೋಟಾವನ್ನು ಪಡೆದು ತಕ್ಷಣವೇ ಮೀನುಗಾರರಿಗೆ ವಿತರಣೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

error: Content is protected !!
Scroll to Top