ಮಂಗಳೂರು : ರೈಲು-ಹೆದ್ದಾರಿ ಅಭಿವೃದ್ಧಿಗೆ ತಜ್ಞರ ಜಂಟಿ ಸಮಿತಿ ರಚನೆ

(ನ್ಯೂಸ್‌ ಕಡಬ) newskadaba.com,  ನ.08 ಮಂಗಳೂರು: ಮಂಗಳೂರು ಹಾಗೂ ಬೆಂಗಳೂರು ನಡುವೆ ಹೈಸ್ಪೀಡ್‌ ಕಾರಿಡಾರ್‌ ಯೋಜನೆಯಡಿ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ಸೇರಿದಂತೆ ರೈಲ್ವೇ ಮತ್ತು ಹೆದ್ದಾರಿಗಳ ಸಮಗ್ರ ಅಭಿವೃದ್ಧಿಯ ಜಂಟಿ ಸಮೀಕ್ಷೆಗೆ ಕೇಂದ್ರ ಸರಕಾರ ತಜ್ಞರ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ.

ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಹಾಗೂ ರೈಲ್ವೆ ಮಾರ್ಗ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಎರಡೂ ಇಲಾಖೆಗಳ ಸಹಭಾಗಿತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಸಂಸದರು ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಹೆದ್ದಾರಿ ಸಚಿವಾಲಯವು ತಜ್ಞರ ಜಂಟಿ ಕಾರ್ಯಕಾರಿ ಸಮಿತಿ ರಚಿಸಿದೆ.

ರೈಲ್ವೆ ಇಲಾಖೆಯೊಂದಿಗೆ ಶಿರಾಡಿ ಘಾಟ್‌ ಪ್ರದೇಶದ ಜಂಟಿ ಸಮೀಕ್ಷೆ ನಡೆಸಲು ಸಮಿತಿ ನೇಮಿಸುವ ಕುರಿತು ತಾವು ಮಾಡಿದ ವಿಚಾರವನ್ನು ಪರಿಶೀಲಿಸಲಾಗಿದೆ. ಹೆದ್ದಾರಿ ಸಚಿವಾಲಯ, ರೈಲ್ವೆ ಸಚಿವಾಲಯ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಈ ತಜ್ಞರ ಸಮಿತಿಯು ಶಿರಾಡಿ ಘಾಟ್‌ ಪ್ರದೇಶದಲ್ಲಿ ರೈಲು ಮತ್ತು ರಸ್ತೆ ಸಂಪರ್ಕಿತ ಸುರಂಗ ಮಾರ್ಗದ ಸಾಧ್ಯತೆ ಹಾಗೂ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದೆ ಎಂದು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಸಂಸದರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

 

Scroll to Top