ಖಾಸಗಿ SSLC ಪರೀಕ್ಷಾರ್ಥಿಗಳಿಗೆ ಆನ್‌ಲೈನ್‌ ನೋಂದಣಿ ಕಿರಿಕಿರಿ- ಸಮೀಪದ ಶಾಲೆಗಳಲ್ಲಿ ಪರೀಕ್ಷೆಗಿಲ್ಲ ಅವಕಾಶ!

(ನ್ಯೂಸ್‌ ಕಡಬ) newskadaba.com,  ಅ..24 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಖಾಸಗಿಯಾಗಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಮಂಡಳಿಯ ಹೊಸ ಆನ್‌ಲೈನ್ ವ್ಯವಸ್ಥೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂಕೀರ್ಣವಾದ ಆನ್‌ಲೈನ್‌ ಪ್ರಕ್ರಿಯೆ, ಶುಲ್ಕ ಪಾವತಿಸಿದ ನಂತರವೇ ನೋಂದಣಿ ಶಾಲೆಯ ಹೆಸರು ತಿಳಿಯುವುದು ಮತ್ತು ಅದು ಬಹಳ ದೂರದಲ್ಲಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿದೆ. ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದರೂ, ಮೂಲ ಪ್ರತಿಗಳನ್ನು ಖುದ್ದಾಗಿ ಶಾಲೆಗೆ ಹೋಗಿ ಸಲ್ಲಿಸಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಿದೆ.

 

2026ರ ಮಾರ್ಚ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆಯಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಶಾಕ್ ನೀಡಿದೆ. ಹೊಸ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಬದಲು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು, ಗೊಂದಲಗಳ ಗೂಡಾಗಿದೆ. ತಮ್ಮ ಮನೆ ಅಥವಾ ಕೆಲಸ ಮಾಡುವ ಸ್ಥಳದ ಸಮೀಪದ ಶಾಲೆಗಳಲ್ಲಿ ನೋಂದಣಿಗೆ ಅವಕಾಶವನ್ನು ಮಂಡಳಿ ನಿರಾಕರಿಸಿದ್ದು, ವಿದ್ಯಾರ್ಥಿಗಳು ದೂರದ ಶಾಲೆಗಳಿಗೆ ಅಲೆಯುವಂತಾಗಿದೆ.

ಅಕ್ಟೋಬರ್ 31 ನೋಂದಣಿಗೆ ಕೊನೆಯ ದಿನವಾಗಿದ್ದು, ದೀಪಾವಳಿ ರಜೆ ಮುಗಿದು ಅಕ್ಟೋಬರ್ 23ರಿಂದ ಶಾಲೆಗಳು ಆರಂಭವಾಗಿವೆ. ಕಡಿಮೆ ಸಮಯದಲ್ಲಿ ನಿಧಾನಗತಿಯ ಸರ್ವರ್‌ನೊಂದಿಗೆ ನೋಂದಣಿ ಮಾಡುವುದು ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿದೆ.ಈ ಹಿನ್ನೆಲೆಯಲ್ಲಿ, ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು, ಪಿನ್‌ಕೋಡ್ ಆಧಾರದಲ್ಲಿ ಸಮೀಪದ ಶಾಲೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡಬೇಕು ಮತ್ತು ಅಂತಿಮ ದಿನಾಂಕವನ್ನು ವಿಸ್ತರಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.

Scroll to Top