(ನ್ಯೂಸ್ ಕಡಬ) newskadaba.com, ಅ.15: ರಾಜ್ಯ ಕಾಂಗ್ರೆಸ್ ಸರ್ಕಾರ ಭೂಮಿ ಹಕ್ಕಿನ 6ನೇ ಗ್ಯಾರಂಟಿಯನ್ನು ಜಾರಿಗೊಳಿಸುತ್ತಿದ್ದು, ಬಿ ಖಾತಾಗಳನ್ನು ಎ ಖಾತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ಪರಿವರ್ತಿಸಲು ಸಿದ್ಧಪಡಿಸಿರುವ ವೆಬ್ಸೈಟ್ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿವೆ. ಅದರಲ್ಲಿ 7.5 ಲಕ್ಷ ಎ ಖಾತೆಗಳಿದ್ದು, ಇನ್ನೂ 7.5 ಲಕ್ಷ ಬಿ ಖಾತೆಗಳಿವೆ. ಸುಮಾರು 8 ರಿಂದ 9 ಲಕ್ಷ ಅಸ್ತಿಗಳನ್ನೂ ಖಾತೆ ನೋಂದಣಿಗಾಗಿ ಮನವಿ ಸಲ್ಲಿಕೆಯಾಗಿವೆ ಎಂದು ವಿವರಿಸಿದರು.ನಮ ರಾಜ್ಯದಲ್ಲಿನ ಆಸ್ತಿ ದಾಖಲಾತಿಗಳ ಕ್ರಮ ಬದ್ಧತೆ ಮತ್ತು ಡಿಜಿಟಲೀಕರಣಕ್ಕಾಗಿ ಕೇಂದ್ರ ಸರ್ಕಾರ ನಮಗೆ ಪ್ರಶಸ್ತಿ ನೀಡಿದೆ ಎಂದು ಹೇಳಿಕೊಂಡರು.
ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಕಾಯ್ದೆ (ಕೆಟಿಸಿಪಿ ಆ್ಯಕ್ಟ್) 1961ರ ಅಡಿಯಲ್ಲಿ ಅನುಮೋದನೆಗೊಂಡ ಕೃಷಿ ಜಮೀನುಗಳ ಕಂದಾಯ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದರೆ, ಕೆಲವು ಪರಿವರ್ತನೆಯಾಗಿದ್ದು, ಇನ್ನೂ ಕೆಲವು ಪರಿವರ್ತನೆಯಾಗದೇ ಇದ್ದರೆ, ಈ ಆಸ್ತಿಗಳ ಮಾಲೀಕರಿಗೆ ಬ್ಯಾಂಕಿನಿಂದ ಸಾಲ ಪಡೆಯಲು ಮತ್ತು ಕಟ್ಟಡ ನಿರ್ಮಾಣಕ್ಕೆ ನಿಯಮ ಬದ್ಧವಾಗಿ ನಕ್ಷೆ ಅನುಮೋದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಎ ಪರಿವರ್ತನಾ ಅಭಿಯಾನವನ್ನು ಆರಂಭಿಸಿದ್ದೇವೆ.













