(ನ್ಯೂಸ್ ಕಡಬ) newskadaba.com ಅಸ್ಸಾಂ, ಎ.23. ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸೇನಾ ಜೀಪ್ ನದಿಗೆ ಬಿದ್ದ ಪರಿಣಾಮ ಮೂವರು ಯೋಧರು ಹುತಾತ್ಮರಾಗಿರುವ ಘಟನೆಯು ಅಸ್ಸಾಂನ ಗುವಾಹಾಟಿಯಲ್ಲಿ ನಡೆದಿದೆ. ಆಸ್ಸಾಂ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳ ಗಡಿಭಾಗದ ಬ್ರಹ್ಮಪುತ್ರ ನದಿಯಲ್ಲಿ ಈ ಅವಘಡ ಸಂಭವಿಸಿದೆ.
ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಸಾಡಿಯಾ ಎಂಬ ಚಾಪಕೋವ ಮೂಲದ ಮದ್ರಾಸ್ ರೆಜಿಮೆಂಟ್ ಟೆರಿಟೋರಿಯಲ್ ಸೈನ್ಯದ 18 ಮಂದಿ ಯೋಧರು ಈ ಜೀಪಿನಲ್ಲಿ ಪ್ರಯಾಣ ಮಾಡುತ್ತಿದ್ದರು. ರಾತ್ರಿ ಸಂಚಾರ ಮಾಡುತ್ತಿದ್ದ ವೇಳೆಯಲ್ಲಿ ಜೀಪು ಆಕಸ್ಮಿಕವಾಗಿ ಇಡುಲಿ ಮತ್ತು ಕಾಬಾಂಗ್ ಗ್ರಾಮಗಳ ನಡುವೆ ಇದ್ದ ನದಿಯೊಳಗೆ ಬಿದ್ದಿದೆ. ಈ ಪರಿಣಾಮ ಜೀಪಿನಲ್ಲಿ ಪ್ರಯಾಣ ಮಾಡುತ್ತಿದ್ದ 18 ಯೋಧರು ನೀರಿಗೆ ಬಿದ್ದಿದ್ದು, ಈ ಪೈಕಿ 3 ಯೋಧರು ಮೃತಪಟ್ಟಿದ್ದಾರೆ. ಉಳಿದ 15 ಮಂದಿ ಯೋಧರನ್ನು ಪೊಲೀಸ್ ಮತ್ತು ಸೇನೆಯವರು ರಕ್ಷಣಾ ಕಾರ್ಯಚರಣೆ ಮಾಡಿ ರಕ್ಷಣೆ ಮಾಡಿದ್ದಾರೆ.
ಮೃತ ಯೋಧರ ಪೈಕಿ ಒಬ್ಬರು ಕರ್ನಾಟಕದ ವಿಜಯಪುರ ಮೂಲದ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳ ಗ್ರಾಮದ ಯೋಧ ಪರಸುರಾಮ ಖ್ಯಾತನ್ನವರ(32) ಎಂದು ತಿಳಿದಿದೆ. ಮೃತ ಮೂವರು ಯೋಧರಲ್ಲಿ ಒಬ್ಬರ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಗಾಯಗೊಂಡ ಯೋಧರು ಚಾಪಕೋವಾ ಫಸ್ಟ್ ರೆಫರಲ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.