ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ; ಕ್ರಮಕ್ಕೆ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಸೆ. 30 ಲಂಡನ್: ಲಂಡನ್‌ನ  ವಿಶ್ವವಿದ್ಯಾಲಯದ ಬಳಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.ಭಾರತದ ಹೈಕಮಿಷನ್ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಿರುವ ಘಟನೆಯನ್ನು ಖಂಡಿಸಿದೆ. ಇದು ನಾಚಿಕೆಗೇಡಿನ ಕೃತ್ಯ ಮತ್ತು ಅಹಿಂಸೆಯ ಪರಂಪರೆಯ ಮೇಲಿನ ದಾಳಿ ಎಂದು ಕಿಡಿಕಾರಿದೆ.

ರಾಷ್ಟ್ರಪಿತರವರು ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವುದನ್ನು ಚಿತ್ರಿಸುವ ಈ ಪ್ರತಿಮೆಯ ಪೀಠದ ಮೇಲೆ ಭಾರತ ವಿರೋಧಿ ಬರಹಗಳು ಬರೆದಿರುವುದು ಕಂಡುಬಂದಿವೆ. ಪ್ರತಿಮೆಯ ಮೇಲೆ ಬಿಳಿ ಬಣ್ಣವನ್ನು ಬಳಿಯಲಾಗಿತ್ತು. ವಿಶ್ವಸಂಸ್ಥೆಯು ಅಕ್ಟೋಬರ್ 2ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಘೋಷಿಸಿದ್ದು, ಆ ದಿನದಂದು ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಭಜನೆಗಳನ್ನು ಹಾಡಲಾಗುತ್ತದೆ.

ಭಾರತೀಯ ಹೈಕಮಿಷನ್ ಈ ವಿಷಯವನ್ನು ಸ್ಥಳೀಯ ಆಡಳಿತ ಮತ್ತು ಮೆಟ್ರೋಪಾಲಿಟನ್ ಪೊಲೀಸರೊಂದಿಗೆ ಮಾಹಿತಿ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ ಎಂದು ಹೇಳಿದೆ. ಭಾರತೀಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪ್ರತಿಮೆಯನ್ನು ದುರಸ್ತಿ ಕೆಲಸ ಮಾಡುತ್ತಿದ್ದಾರೆ.

 

 

Scroll to Top