(ನ್ಯೂಸ್ ಕಡಬ) newskadaba.com, ಸೆ.25 ಬೆಂಗಳೂರು : ಘೋಷಣೆಯಾದಾಗಿನಿಂದಲೇ ಕುತೂಹಲ ಕೆರಳಿಸಿ, ಟ್ರೈಲರ್ ಮೂಲಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ ʼಕಾಂತಾರ: ಚಾಪ್ಟರ್ 1ʼ ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದೆ. ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿರುವ ಈ ಚಿತ್ರ ಈಗಾಗಲೇ ಹವಾ ಸೃಷ್ಟಿಸಿದ್ದು, ರಿಲೀಸ್‌ಗೆ 1 ವಾರ ಬಾಕಿ ಉಳಿದಿರುವಾಗ ಸಿನಿಮಾತಂಡ ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ದಿನಾಂಕ ಘೋಷಿಸಿದೆ. ಸೆಪ್ಟೆಂಬರ್ 26ರ ಮಧ್ಯಾಹ್ನ 12:29ಕ್ಕೆ ನೀವು ಟಿಕೆಟ್ ಬುಕ್ ಮಾಡಬಹುದು.
ʼʼಮೊದಲ ಅಧ್ಯಾಯದ ಆರಂಭ. ಕರ್ನಾಟಕಾದ್ಯಂತ ʼಕಾಂತಾರ: ಚಾಪ್ಟರ್ 1′ ಅಡ್ವಾನ್ಸ್ ಬುಕ್ಕಿಂಗ್ ಸೆಪ್ಟೆಂಬರ್ 26ರ 12:29ರಂದು ಆರಂಭವಾಗಲಿದೆʼʼ ಎಂದು ಚಿತ್ರತಂಡ ತಿಳಿಸಿದೆ. ಸದ್ಯ ಕರ್ನಾಟಕದಲ್ಲಿ ಮಾತ್ರ ಅಡ್ವಾನ್ಸ್ ಬುಕ್ಕಿಂಗ್ ಘೋಷಿಸಲಾಗಿದೆ. ಉಳಿದ ಕಡೆಗಳಲ್ಲಿನ ವಿವರ ಇನ್ನಷ್ಟೇ ಪ್ರಕಟವಾಗಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚಿತ್ರತಂಡ ಘೋಷಿಸಿದ್ದು, ಉಳಿದ ಕಡೆಗಳಲ್ಲಿಯೂ ಶೀಘ್ರದಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಆರಂಭಿಸುವಂತೆ ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ: ಚಾಪ್ಟರ್ 1ʼ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಘೋಷಣೆಯಾದಾಗಿನಿಂದಲೇ ನಿರೀಕ್ಷೆ ಹುಟ್ಟು ಹಾಕಿರುವ ಇದು 2022ರಲ್ಲಿ ತೆರೆಕಂಡ ʼಕಾಂತಾರʼದ ಪ್ರೀಕ್ವೆಲ್. ತುಳುನಾಡಿನ ವಿಶಿಷ್ಟ ಭೂತಾರಾಧನೆಯನ್ನು ʼಕಾಂತಾರʼದಲ್ಲಿ ಪರಿಚಯಿಸಿದ್ದ ರಿಷಬ್ ಶೆಟ್ಟಿ ಈ ಬಾರಿಯೂ ಅಲ್ಲಿನ ಸಂಸ್ಕೃತಿಯನ್ನು ಪರಿಚಯಿಸಿರುವುದು ಟ್ರೈಲರ್‌ನಲ್ಲಿ ಕಂಡುಬಂದಿದೆ.













