ತೈವಾನ್‌ನಲ್ಲಿ ಸಂಭವಿಸಿದ ರಗಾಸಾ ಚಂಡಮಾರುತಕ್ಕೆ 14 ಮಂದಿ ಸಾವು ; 124 ಮಂದಿ ಕಣ್ಮರೆ

(ನ್ಯೂಸ್‌ ಕಡಬ) newskadaba.com,  ಸೆ.24 ತೈಪೆ : ತೈವಾನ್‌ನಲ್ಲಿ ‘ರಗಾಸಾ’ ಚಂಡಮಾರುತಕ್ಕೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, 124 ಮಂದಿ ನಾಪತ್ತೆಯಾಗಿದ್ದಾರೆ. ಅವಘಡದಲ್ಲಿ 18 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಕಡಲತೀರದಲ್ಲಿ ಪ್ರವಾಹದಿಂದಾಗಿ ನೂರಾರು ಮರಗಳು ಧರೆಗುರುಳಿವೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ರಾಗಸ’ ಚಂಡಮಾರುತ ಸೆ. 23ರಂದು ದಕ್ಷಿಣ ಚೀನಾಕ್ಕೆ ಅಪ್ಪಳಿಸಿದೆ. ಇದರಿಂದಾಗಿ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದೆ. ಚಂಡಮಾರುತ ಬುಧವಾರ(ಸೆ.24) ಹಾಂಗ್ ಕಾಂಗ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನೆಲೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಚೀನಾದ ದಕ್ಷಿಣ ಭಾಗದ ಕನಿಷ್ಠ 10 ನಗರಗಳಲ್ಲಿ ಕಚೇರಿಗಳು ಮತ್ತು ಶಾಲೆಗಳನ್ನು ಮುಚ್ಚುವಂತೆ ಅಧಿಕಾರಿಗಳು ನಿರ್ದೇಶಿಸಿದ್ದಾರೆ.

ತೈವಾನ್ ಪೂರ್ವ ಪ್ರದೇಶದಲ್ಲಿ ಭಾರೀ ಮಳೆಯಾದ ಬೆನ್ನಲ್ಲೇ ಭೂಕುಸಿತ ಸಂಭವಿಸಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿ ರಕ್ಷಣಾ ಕಾರ್ಯ ನಡೆಸುತ್ತಿವೆ.

Scroll to Top