(ನ್ಯೂಸ್ ಕಡಬ) newskadaba.com, ಸೆ.22 ಬೆಂಗಳೂರು : ಪ್ರತಿ ವರ್ಷ ನಾಡಹಬ್ಬ ದಸರಾ ಸಮಯದಲ್ಲಿ ಮೈಸೂರಿನ ಅರಮನೆಯ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಸಂಗೀತ ವಿದ್ವಾನ್ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಪಂ.ಕೆ.ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ದೇಶ ವಿದೇಶಗಳಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಖ್ಯಾತರಾಗಿರುವ ಹಿಂದುಸ್ತಾನಿ ಸಂಗೀತ ದಿಗ್ಗಜರಲ್ಲಿ ಒಬ್ಬರೆನಿಸಿದ ಪಂ. ವೆಂಕಟೇಶ್ ಕುಮಾರ್ ಅವರ ಆಯ್ಕೆ ಅತ್ಯಂತ ಸಂತೋಷ ತಂದಿದೆ. ಸೆಪ್ಟೆಂಬರ್ 22ರಂದು ಮೈಸೂರಿನ ಅರಮನೆಯ ಮುಂಭಾಗದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಡಾ. ವೈ ಕೆ ಮುದ್ದುಕೃಷ್ಣ ಅವರ ಆಯ್ಕೆ ಸಲಹಾ ಸಮಿತಿ ಪಂ. ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಿದೆ ಎಂದರು. ಈ ಪ್ರಶಸ್ತಿಯು ಐದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.













