(ನ್ಯೂಸ್ ಕಡಬ) newskadaba.com, ಸೆ.12 ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರನ್ನು ಬಳಸಿಕೊಂಡು ಮತ್ತೊಮ್ಮೆ ಜಾತಿ ಗಣತಿ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ರಾಜಧಾನಿಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು. 1.75 ಲಕ್ಷ ಮಂದಿ ಶಿಕ್ಷಕರನ್ನು ಬಳಸಿಕೊಂಡು ಸೆ.22ರಿಂದ ಅ.7ರವರೆಗೆ ಹೊಸ ಜಾತಿಗಣತಿ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
10 ವರ್ಷದ ಹಿಂದೆ ಜಾತಿಗಣತಿ ನಡೆಸಲಾಗಿತ್ತು. ಈಗ ಮತ್ತೆ ಜಾತಿಗಣತಿ ನಡೆಸಲಾಗುತ್ತಿದೆ. ಅಸಮಾನತೆ ಉಳಿಯಲು ನಾವು ಬಿಡಬಾರದು. ಹೀಗಾಗಿ ಸಾಮಾಜಿಕ, ಶೈಕ್ಷಣಿಕ ವಲಯದಲ್ಲಿ ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಎಲ್ಲಾ ಜನರಲ್ಲೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ ಎಂದರು.
ಡಿಸೆಂಬರ್ ಒಳಗಾಗಿ ಸಮೀಕ್ಷೆ ಪೂರ್ಣಗೊಳ್ಳಲಿದೆ. 1.75 ಲಕ್ಷ ಮಂದಿ ಶಿಕ್ಷಕರನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಸಮೀಕ್ಷೆ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದರೆ ಆಯೋಗದ ಸಹಾಯವಾಣಿ 8050770004 ನ್ನು ಸಂಪರ್ಕಿಸಿ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಆಯೋಗದ ವೆಬ್‌ಸೈಟ್ ವಿಳಾಸ www.ksdckarnatakagovt.in ಮೂಲಕವೂ ಸಹ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಶಿಕ್ಷಕರು ಸಮೀಕ್ಷೆ ಮಾಡುವ ಮೊದಲೇ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯ ಅರ್ಜಿ ಫಾರಂ ನೀಡುತ್ತಾರೆ. ಬೆಸ್ಕಾಂ ಸಿಬ್ಬಂದಿ ಮನೆಮನೆಗೆ ಸ್ಟಿಕರ್ ಅಂಟಿಸುತ್ತಾರೆ. ಮಾದರಿ ಸಮೀಕ್ಷೆಯ ಅರ್ಜಿ ಮೊದಲೇ ದೊರಕುವುದರಿಂದ ಸಮೀಕ್ಷೆಯ ಪ್ರಶ್ನೆಗಳಿಗೆ ಉತ್ತರ ನೀಡಲು ಅನುಕೂಲವಾಗಲಿದೆ. ಸುಮಾರು 2 ಕೋಟಿ ಮನೆಗಳಿಗೆ ಸಮೀಕ್ಷಾ ಸಿಬ್ಬಂದಿ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ಕಾಂತರಾಜು ವರದಿಯನ್ನು ನಾವು ಒಪ್ಪಿಕೊಂಡಿಲ್ಲ. ಬಳಿಕ ಜಯಪ್ರಕಾಶ್ ಹೆಗಡೆ ಹಿಂದುಳಿದ ಆಯೋಗದ ಅಧ್ಯಕ್ಷರಾದರು. 2015 ರಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆಗಿತ್ತು. 10 ವರ್ಷ ಆಗಿದೆ ಅಂತ ಹೊಸ ಸಮೀಕ್ಷೆಗೆ ತೀರ್ಮಾನ ಆಗಿದೆ. ಸಮೀಕ್ಷೆ ಜವಾಬ್ದಾರಿ ಹಿಂದುಳಿದ ಆಯೋಗಕ್ಕೆ ವಹಿಸಿದ್ದೇನೆ. ಜಾತಿ, ಧರ್ಮ ಹಾಗೂ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಗೊತ್ತಾಗಬೇಕು. ಅವರ ಹಿನ್ನೆಲೆ ಗೊತ್ತಾದಾಗ ವಿಶೇಷ ಕಾರ್ಯಕ್ರಮ ರೂಪಿಸಬಹುದು. ಹಿಂದೆ ಕಾಂತರಾಜು ಅಧ್ಯಕ್ಷತೆಯಲ್ಲಿ ಸಮೀಕ್ಷೆ ಮಾಡಲು ಸೂಚಿಸಿದ್ದೆ. ಆ ವರದಿ ಹಳೆಯದು ಅಂತ ಪರಿಗಣನೆ ಮಾಡಲಿಲ್ಲ. ಈಗ ಹೊಸದಾಗಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸೂಚಿಸಿದ್ದೇನೆ ಎಂದರು.













