(ನ್ಯೂಸ್ ಕಡಬ) newskadaba.com ಸೆ. 09. ಡಿಜಿಟಲ್ ಅರೆಸ್ಟ್ ಗೆ ಒಳಗಾಗಿ ಔರದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ 30 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಮಾಜಿ ಶಾಸಕರನ್ನು ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ತಿಳಿಸಿದ ಖದೀಮರು, ಹಂತ ಹಂತವಾಗಿ 30 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲು ಆಗಸ್ಟ್ 12ರಂದು ಸಿಬಿಐ ಆಫೀಸರ್ ಎಂದು ಕರೆ ಮಾಡಿದ್ದ ಖದೀಮರು, ನೀವು ನರೇಶ್ ಗೋಯಲ್ ಮನಿ ಲಾಂಡರಿಂಗ್ ಕೇಸ್ ನಲ್ಲಿ ಭಾಗಿಯಾಗಿದ್ದೀರಿ. ನರೇಶ್ ಗೋಯಲ್ ಜೊತೆ ಅಕ್ರಮ ವ್ಯವಹಾರ ಮಾಡಿದ್ದೀರಿ ಎಂದು ಗುಂಡಪ್ಪ ವಕೀಲ್ ಅವರನ್ನು ಬೆದರಿಸಿದ್ದರು. ಆ.13ರಂದು ಸಿಬಿಐ ಡಿಸಿಪಿ ಎಂದು ಮತ್ತೋರ್ವ ಕರೆ ಮಾಡಿ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಾ, ಕಾಲ್ ಕಟ್ ಮಾಡಬೇಡಿ ಎಂದು ಹೆದರಿಸಿದ್ದ. ಬಳಿಕ ಆನ್‌ಲೈನ್ ನಲ್ಲಿ ಫೇಕ್ ಜಡ್ಜ್ ಮುಂದೆ ಹಾಜರು ಪಡಿಸಿದ್ದ ಖದೀಮರು ಕೋರ್ಟ್ ಹಾಲ್ ರೀತಿ ಸೆಟಪ್ ಮಾಡಿ ನಂಬಿಕೆ ಹುಟ್ಟಿಸಿದ್ದರು.
ಹೀಗೆ ಖದೀಮರ ಮಾತು ನಂಬಿ ಹಂತ-ಹಂತವಾಗಿ 30.99 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ಹಾಕಿಸಿಕೊಂಡು ತನಿಖೆ ಮುಗಿದ ನಂತರ ಮರಳಿ ಕೊಡುವುದಾಗಿ ಖದೀಮರು ಮಾಜಿ ಶಾಸಕರನ್ನ ನಂಬಿಸಿದ್ದರು.
ಹಣ ಮರಳಿ ಬಾರದಿದ್ದಾಗ ಮಾಜಿ ಶಾಸಕ ಗುಂಡಪ್ಪ ವಕೀಲ್ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಗುಂಡಪ್ಪ ವಕೀಲ್ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ.













