ದೇವೇಗೌಡರಿಂದ ಪ್ರಧಾನಿ ಮೋದಿಗೆ ಶ್ಲಾಘನಾ ಪತ್ರ

 (ನ್ಯೂಸ್‌ ಕಡಬ) newskadaba.com,  ಸೆ.04 ಬೆಂಗಳೂರು: ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ (ಶಾಂಘೈ ಸಹಕಾರ ಸಂಸ್ಥೆ) ಶೃಂಗಸಭೆ ಈ ಬಾರಿ ಭಾರತ, ಚೀನಾ ಮತ್ತು ರಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಚರ್ಚೆಗಳಿಗೆ ವೇದಿಕೆಯಾಗಿದ್ದು, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಚೀನಾದ ಪ್ರವಾಸ ದೇಶ-ವಿದೇಶಗಳಲ್ಲಿ ಗಮನಸೆಳೆದಿದೆ. ಈ ಪ್ರವಾಸದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪತ್ರ ಬರೆದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ ದೇವೇಗೌಡರು, “ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ಚೀನಾ ಪ್ರವಾಸವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಸುಂಕ ಯುದ್ಧಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿರುವ ನಿಮ್ಮ ಪ್ರಯತ್ನ ಪ್ರಶಂಸನೀಯ. ಈ ಕಾರಣಕ್ಕಾಗಿ ಭಾರತದ ಲಕ್ಷಾಂತರ ಜನರು ನಿಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ,” ಎಂದು ಅವರು ಹೇಳಿದ್ದಾರೆ.

ಅಲ್ಲದೇ, ರಷ್ಯಾ ಮತ್ತು ಚೀನಾ ರಾಷ್ಟ್ರಗಳ ಅಧ್ಯಕ್ಷರ ಜೊತೆ ಮೋದಿ ಹೊಂದಿರುವ ಸ್ನೇಹಜಾಲವು ಜಗತ್ತಿಗೆ ಹೊಸ ಸಂದೇಶ ನೀಡಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಉಕ್ರೇನ್ ಯುದ್ಧ ಮುಕ್ತಾಯದ ಕುರಿತು ಅಧ್ಯಕ್ಷ ಪುಟಿನ್ ಅವರೊಂದಿಗೆ ನಡೆಸಿದ ಚರ್ಚೆಯನ್ನು ಅವರು ಶ್ಲಾಘಿಸಿದ್ದು, “ನೀವು ಅನುಸರಿಸುತ್ತಿರುವ ನೀತಿಗಳು ಸಮೃದ್ಧ ಭಾರತ ನಿರ್ಮಾಣಕ್ಕೆ ದಾರಿ ಹಾಕಲಿವೆ,” ಎಂದು ತಿಳಿಸಿದ್ದಾರೆ.

 

Scroll to Top