(ನ್ಯೂಸ್ ಕಡಬ) newskadaba.com ಆ. 23. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ) ಕಾಯ್ದೆಯ ಅನುಷ್ಠಾನಕ್ಕಾಗಿ ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ವಯ ಕಾಯ್ದೆಯು ಅನ್ವಯಿಸುವ 10 ಮತ್ತು 10 ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಪ್ರತಿ ಸಂಸ್ಥೆಯ ಮಾಲೀಕರು ತಮ್ಮ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿರುತ್ತದೆ.
ಹಲವು ಸಂಸ್ಥೆಗಳು ಇದುವರೆಗೂ ಆಂತರಿಕ ಸಮಿತಿಯನ್ನು ರಚಿಸದೇ ಮತ್ತು ರಚಿಸಿರುವ ಬಗ್ಗೆ ಮಾಹಿತಿ ನೀಡದಿರುವುದು ಕಂಡು ಬಂದಿರುತ್ತದೆ.
ಹಾಗಾಗಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ, ಆಂತರಿಕ ಸಮಿತಿಯನ್ನು ರಚಿಸದ ಎಲ್ಲಾ ಸಂಸ್ಥೆಗಳು ಈ ಕೂಡಲೇ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಿ, ಸಮಿತಿ ರಚಿಸಿದ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಕೂಡಲೇ ಸಲ್ಲಿಸಿ, ಅದರ ಪ್ರತಿಯನ್ನು ನಗರದ ಯೆಯ್ಯಾಡಿ ಶರ್ಬತ್ ಕಟ್ಟೆಯಲ್ಲಿರುವ ಕಾರ್ಮಿಕ ಭವನದ ಕಾರ್ಮಿಕ ಅಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು ಎಂದು ಉಪ ವಿಭಾಗ 1, 2 ರ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









