(ನ್ಯೂಸ್ ಕಡಬ) newskadaba.com ಆ. 19. ಬೆಂಗಳೂರು: ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಅವಕಾಶ ನೀಡುವ ಕರ್ನಾಟಕ ಭೂ ಸುಧಾರಣಾ ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಸೋಮವಾರ ವಿಧಾನ ಪರಿಷತ್ತಿನಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಮಸೂದೆಯನ್ನು ಮಂಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಎರಡು ಎಕರೆವರೆಗಿನ ಕೃಷಿ ಭೂಮಿಯಲ್ಲಿ ಎಂಎಸ್‌ಎಂಇ ಘಟಕಗಳನ್ನು ಸ್ಥಾಪಿಸಬೇಕಾದರೆ, ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಮಸೂದೆಯು ಪರಿವರ್ತನೆ ಷರತ್ತನ್ನು ತೆಗೆದುಹಾಕುವುದರಿಂದ ಅದು ಸ್ವಯಂಚಾಲಿತವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಎಲ್ಲೇ ಆಗಲಿ 2 ಎಕರೆ ವರೆಗೆ ಕೈಗಾರಿಗೆ ಮಾಡಲು ಪರಿವರ್ತನೆಗೆ ವಿನಾಯಿತಿ ನೀಡಲಾಗುತ್ತದೆ. ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದ ಉತ್ತೇಜನಕ್ಕಾಗಿ ಸೋಲಾರ್, ಪವನ ಶಕ್ತಿ ಘಟಕ ಸ್ಥಾಪಿಸಲು ಅನುಮತಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹಾಗಾಗಿ ಇಂತಹ ಘಟಕಗಳ ಸ್ಥಾಪನೆಗೂ ಭೂ ಪರಿವರ್ತನೆ ಅಗತ್ಯವಿಲ್ಲ ಎಂಬ ಅವಕಾಶವನ್ನು ಈ ತಿದ್ದುಪಡಿಯಲ್ಲಿ ತರಲಾಗಿದೆ ಎಂದು ವಿವರಿಸಿದರು.













