ಕಥುವಾದಲ್ಲಿ ಮೇಘಸ್ಪೋಟ: ನಾಲ್ವರು ಸಾವು

(ನ್ಯೂಸ್‌ ಕಡಬ) newskadaba.com, ಆ.17:‌ ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯ ಜಂಗ್ಲೋಟ್‌ ಹಳ್ಳಿಯಲ್ಲಿ ಮೇಘಸ್ಪೋಟವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹಠಾತ್‌ ಪ್ರವಾಹದಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬೆನ್ನಲ್ಲೇ ಜಮ್ಮು–ಕಾಶ್ಮೀರದ ಸಂಸದ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮೇಘಸ್ಪೋಟದಿಂದ ರೈಲ್ವೆ ಹಳಿ, ರಾಷ್ಟ್ರೀಯ ಹೆದ್ದಾರಿ-44 ಹಾಗೂ ಪೊಲೀಸ್‌ ಠಾಣೆಗೆ ಹಾನಿಯಾಗಿದೆ. ನಾಗರಿಕ ಆಡಳಿತ, ಮಿಲಿಟರಿ ಹಾಗೂ ಅರೆಸೇನಾ ಪಡೆಗಳು ಕಾರ್ಯಪ್ರವೃತ್ತವಾಗಿವೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಜಿತೇಂದ್ರ ಸಿಂಗ್‌ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಘಟನೆ ಸಂಬಂಧ ಜಮ್ಮು–ಕಾಶ್ಮೀರ ಸಿಎಂ ಒಮರ್‌ ಅಬ್ದುಲ್ಲಾ ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಮೇಘಸ್ಪೋಟ ಸಂಭವಿಸಿದ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Scroll to Top