(ನ್ಯೂಸ್ ಕಡಬ) newskadaba.com, ಆ.08: ಧರ್ಮಸ್ಥಳ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಬಂಧ ಧರ್ಮಸ್ಥಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬುಧವಾರ ನಡೆದ ಯೂಟ್ಯೂಬರ್ ಮತ್ತು ಸುದ್ದಿ ವಾಹಿನಿಯ ಪತ್ರಕರ್ತನ ಮೇಲಿನ ದಾಳಿಗೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ನಾಲ್ಕು ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಮೂರು ಸೇರಿದಂತೆ ಒಟ್ಟು ಏಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಧರ್ಮಸ್ಥಳ ಗ್ರಾಮ ಕನ್ಯಾಡಿ ನಿವಾಸಿ, ಜೀಪು ಚಾಲಕ ಸೋಮನಾಥ ಸಪಲ್ಯ (48) ಬಂಧಿತ ಆರೋಪಿ. ಸದ್ಯ ಆರೋಪಿಯನ್ನು14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಧರ್ಮಸ್ಥಳದಲ್ಲಿ, ಬಂಟ್ವಾಳ ನಿವಾಸಿ ಮತ್ತು ‘ಕುಡ್ಲ ರಾಂಪೇಜ್’ ಯೂಟ್ಯೂಬ್ ಚಾನೆಲ್‌ನ ಮಾಲೀಕ ಅಜಯ್ ದೂರು ನೀಡಿದ್ದರು. ಪಾಂಗಳ ಕ್ರಾಸ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡುತ್ತಿದ್ದಾಗ 15-50 ದುಷ್ಕರ್ಮಿಗಳ ಗುಂಪು ತನ್ನ ಮೇಲೆ ಹಾಗೂ ನನ್ನ ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದಾಳಿಕೋರರು ಕ್ಯಾಮೆರಾವನ್ನು ಹಾನಿಗೊಳಿಸಿದರು, ಮೆಮೊರಿ ಕಾರ್ಡ್ ಕದ್ದಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಪಾಂಗಳ ಕ್ರಾಸ್‌ನಲ್ಲಿ ಗಲಾಟೆ ಸೃಷ್ಟಿಸಿದ 25-50 ಜನರ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸದಂತೆ ಗುಂಪೊಂದು ಅಡ್ಡಿಪಡಿಸಿದೆ ಎಂದು ವರದಿಯಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಮುಂದೆ ಸುಮಾರು 50-100 ಜನರು ಕಾನೂನು ನಿಯಮಗಳನ್ನು ಉಲ್ಲಂಘಿಸಿ ಜಮಾಯಿಸಿದ ನಂತರ ಮೂರನೇ ಎಫ್‌ಐಆರ್ ಅನ್ನು ಸ್ವಯಂಪ್ರೇರಿತವಾಗಿ ದಾಖಲಿಸಲಾಗಿದೆ.
ನಾಲ್ಕನೇ ಪ್ರಕರಣವು ಬೆಳ್ತಂಗಡಿಯ ಪ್ರಮೋದ್ ಕುಮಾರ್ ಶೆಟ್ಟಿ ಎಂಬವರು ನೀಡಿದ ದೂರನ್ನು ಆಧರಿಸಿದೆ, ಅವರು 30-40 ಜನರ ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಿದೆ, ಎರಡು ವಾಹನಗಳಿಗೆ ಹಾನಿ ಮಾಡಿದ್ದಾರೆ ಮತ್ತು ಕ್ಯಾಮೆರಾವನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.









