(ನ್ಯೂಸ್ ಕಡಬ) newskadaba.com, ಆ.08: ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಮರು ಜಾತಿ ಜನಗಣತಿ ನಡೆಸುವ ಚಟುವಟಿಕೆ ಮತ್ತೆ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯ ಕಾರ್ಯವನ್ನು ಡಿಜಿಟಲ್ ವಿಧಾನದಲ್ಲಿ ನಡೆಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಡಿಜಿಟಲ್ ವಿಧಾನವನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಅಗತ್ಯವಾದ ತಂತ್ರಾಂಶದ ಅಭಿವೃದ್ಧಿ ಹಾಗೂ ಉಸ್ತುವಾರಿಯನ್ನು ಇ-ಆಡಳಿತ ಇಲಾಖೆಯ ಮೂಲಕ ಕೈಗೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಇದರ ಮೂಲಕ ಸಮೀಕ್ಷೆ ಹೆಚ್ಚು ನಿಖರ ಹಾಗೂ ಸಮಯಬದ್ಧವಾಗಿ ನಡೆಯುವ ನಿರೀಕ್ಷೆ ಇದೆ.
ಈಗಾಗಲೇ, ಒಳ ಮೀಸಲಾತಿ ಸಮೀಕ್ಷೆಯಲ್ಲಿ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಆಧಾರಿತ ಮಾದರಿಯನ್ನು ಬಳಸಿತ್ತು. ಇದೇ ಮಾದರಿಯನ್ನು ಈಗ ಜಾತಿ ಜನಗಣತಿಯಲ್ಲಿಯೂ ಅಳವಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಚುನಾವಣಾ ಆಯೋಗದ ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಯನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.













