ಕೊಯಿಲ: ಕುಸಿತದ ಭೀತಿಯಲ್ಲಿರುವ ಟ್ಯಾಂಕ್ ತೆರವುಗೊಳಿಸದೆ ನಿರ್ಲಕ್ಷತೆ- ಪ್ರತಿಭಟನೆಯ ಎಚ್ಚರಿಕೆ



(ನ್ಯೂಸ್ ಕಡಬ) newskadaba.com ಜು. 24. ಕಡಬ ತಾಲ್ಲೂಕು ಕೊಯಿಲ ಗ್ರಾಮ ಪಂಚಾಯತ್ ಅಧೀನದಲ್ಲಿರುವ ಕೊಯಿಲ ಜನತಾ ಕಾಲೋನಿಯಲ್ಲಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ಕುಸಿತವಾಗುವ ಸನಿಹಕ್ಕೆ ಬಂದು ನಿಂತಿದ್ದು, ಅಪಾಯ ಎದುರಾಗುವ ಎಲ್ಲಾ ಸಾಧ್ಯತೆಗಳು ಇದ್ದರೂ ತಾಲ್ಲೂಕು ಯಾ ಜಿಲ್ಲಾಡಳಿತ ಲಘುವಾಗಿ ಪರಿಗಣಿಸುತ್ತಾ, ಇದರ ತೆರವು ಕಾರ್ಯಕ್ಕೆ ಮುಂದಾಗದೆ ತೀರಾ ನಿರ್ಲಕ್ಷತೆ ತೋರುತ್ತದೆ, ವಾರದ ಒಳಗಾಗಿ ತೆರವುಗೊಳಿಸದೆ ಇದ್ದಲ್ಲಿ ಸಂಘಟಿತರಾಗಿ ಪ್ರತಿಭಟನೆ ನಡೆಸುವ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.







 

ಕೊಯಿಲ ಜನತಾ ಕಾಲೋನಿಯಲ್ಲಿ 1996ರಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆ ಮೂಲಕ ನಿರ್ಮಿಸಲಾದ ಬೃಹತ್ ಟ್ಯಾಂಕ್‍ ನ ಬಡದಿಂದಲೇ 15 ಅಡಿ ಎತ್ತರದಲ್ಲಿರುವ ಧರೆ ಕುಸಿತವಾಗಿದೆ. ನಿರಂತರವಾಗಿ ಸುರಿಯುವ ಮಳೆಗೆ ಮಣ್ಣು ಸಡಿಲವಾಗಿ ಧರೆ ಇನ್ನಷ್ಟು ಕುಸಿಯುತ್ತಲೇ ಇದೆ. ಯಾವು ಕ್ಷಣದಲ್ಲಿ ಇದು ಕುಸಿಯುವ ಹಂತದಲ್ಲಿದ್ದು, ಅಪಾಯ ಎದುರಾಗುವುದರಲ್ಲಿ ಸಂದೇಹವೇ ಇಲ್ಲ, ಟ್ಯಾಂಕ್‍ನ ಅಡಿಯಲ್ಲಿ 10ಕ್ಕೂ ಅಧಿಕ ಮನೆಗಳಿದ್ದು, ಅದು ಕುಸಿತಗೊಂಡಲ್ಲಿ ಮನೆಗಳೂ ನೆಲಸಮವಾಗುವ ಸಾಧ್ಯತೆಯ ಬಗ್ಗೆ ಸ್ಥಳೀಯ ನಿವಾಸಿಗಳು ಭೀತಿ ವ್ಯಕ್ತಪಡಿಸಿದ್ದಾರೆ.






ತಿಂಗಳ ಹಿಂದೆ ಪಂಚಾಯಿತಿ ನೋಟೀಸು: ಟ್ಯಾಂಕ್ ಕುಸಿತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಟ್ಯಾಂಕ್ ಸಮೀಪದಲ್ಲಿರುವ 6 ಮನೆಯವರನ್ನು ಮನೆ ಖಾಲಿ ಮಾಡುವಂತೆ ಕೊಯಿಲ ಗ್ರಾಮ ಪಂಚಾಯಿತಿ ತಿಂಗಳ ಹಿಂದೆ ನೊಟೀಸು ನೀಡಿದೆ. ಇದಕ್ಕೆ ಸಮ್ಮತಿಸದ ಮನೆಯವರು “ಮನೆಯಲ್ಲಿ ಹಾಲು ಕರೆಯುವ ದನ-ಕರು ಇದೆ ಅವನ್ನು ಎಲ್ಲಿ ಕರೆದೊಯ್ಯಲಿ, ಬಹುತೇಕ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದು, ಅವರನ್ನೆಲ್ಲ ಕರೆದುಕೊಂಡು ನಾವುಗಳು ಎಲ್ಲಿಗೆ ಹೋಗಬೇಕು” ಎಂದು ಪ್ರಶ್ನಿಸಿ ಟ್ಯಾಂಕ್ ನೆಲಸಮ ಮಾಡಿ, ಆ ವೇಳೆಯಲ್ಲಿ ನಾವುಗಳು ನೆಂಟರ ಮನೆಗೆ ಹೋಗಿಯಾದರೂ ಉಳಿದುಕೊಂಡು ಬರುತ್ತೇವೆ, ಆದರೆ ಪೂರ್ಣ ಪ್ರಮಾಣದಲ್ಲಿ ಮನೆ ಖಾಲಿ ಮಾಡಿ ಹೋಗುವುದಕ್ಕೆ ನಮ್ಮಿಂದ ಸಾಧ್ಯವಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂದೆ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.

ಟೆಂಡರ್ ಆಗಿತ್ತು, ಬಿಡ್ ಬರಲಿಲ್ಲ-ಅಧ್ಯಕ್ಷೆ

ಟ್ಯಾಂಕ್ ತೆರವು ಮಾಡುವ ಸಲುವಾಗಿ ಪಂಚಾಯಿತಿ ಟೆಂಡರ್ ಕರೆದಿತ್ತು. ಪಂಚಾಯಿತಿ ಬಿಡ್ 60 ಸಾವಿರ ನಿಗಧಿಯಾಗಿತ್ತು. ಯಾರೂ ಬಿಡ್ ಹಾಕಿರಲಿಲ್ಲ, ಈ ಬಗ್ಗೆ ತಾಲ್ಲೂಕು ಪಂಚಾಯಿತಿಗೆ ತಿಳಿಸಲಾಗಿದೆ, ಅಲ್ಲಿಂದ ಆದೇಶ ಆದ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್ ತಿಳಿಸಿದ್ದಾರೆ.

 

ಸರ್ಕಾರವೇ ತೆಗೆದು ಕೊಡಬೇಕು-ಸಲೀಕ ಕೆಮ್ಮಾರ

ಬಿಡ್ ಹಾಕಿ, ಹಣ ಕಟ್ಟಿ ಅದನ್ನು ತೆಗೆಯುವವರಿಗೆ ಏನೂ ಲಾಭ ಇರುವುದಿಲ್ಲ. ಹೊರತಾಗಿ ಅದನ್ನು ಕೆಡವುವಾಗ ಅದರಿಂದಾಗಿ ಅದರ ಅಡಿಯಲ್ಲಿರುವ ಮನೆಗಳಿಗೆ ಹಾನಿ ಉಂಟಾದರೆ ಯಾರು ಹೊಣೆ? ಆದ ಕಾರಣ ಸರಕಾರವೇ ಮಳೆ ಹಾನಿ ಯಾ ಯಾವುದಾದರೂ ನಿಧಿ ಬಳಸಿಕೊಂಡು ಅದನ್ನು ತೆರವು ಮಾಡಿಕೊಡಬೇಕು. ಇನ್ನು 1 ವಾರದ ಒಳಗಾಗಿ ಈ ಬಗ್ಗೆ ಕ್ರಮಕೈಗೊಳ್ಳದೇ ಇದ್ದಲ್ಲಿ ಗ್ರಾಮಸ್ಥರು ಸಂಘಟಿತರಾಗಿ ಪಂಚಾಯಿತಿ ಮುಂದೆ ಧರಣಿ ಯಾ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅನಿವಾರ್ಯವಾದೀತು.

-ಸಲೀಕ ರೆಹಮಾನ್ ಕೆಮ್ಮಾರ, ಸಾಮಾಜಿಕ ಕಾರ್ಯಕರ್ತೆ.

error: Content is protected !!
Scroll to Top