(ನ್ಯೂಸ್ ಕಡಬ) newskadaba.com ಜು. 17. ಶಾಲಾ- ಕಾಲೇಜುಗಳಲ್ಲಿ ನಡೆಯುವ ರ್ಯಾಗಿಂಗ್ ಹಾಗೂ ಡ್ರಗ್ಸ್ ಸೇವನೆ ನಿಯಂತ್ರಣಕ್ಕೆ ಉನ್ನತ ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, ಇನ್ನುಮುಂದೆ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸುವಂತೆ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ, ಖಾಸಗಿ ವಿಶ್ವ ವಿದ್ಯಾಲಯಗಳು, ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಪದವಿ ಹಾಗೂ ಪಾಲಿ ಟೆಕ್ನಿಕ್ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವ್ಯಸನ, ರ್ಯಾಗಿಂಗ್ ಹಾಗೂ ಲೈಂಗಿಕ ದೌರ್ಜನ್ಯ ಸೇರಿ ಇನ್ನಿತರ ಅಕ್ರಮ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಿ ಅದೇಶಿಸಿದೆ.
ಇನ್ನು ಈಗಾಗಲೇ ಸಿಸಿಟಿವಿ ಅಳವಡಿಸಿರುವ ಕಾಲೇಜುಗಳಲ್ಲಿ ಅವುಗಳು ಕಾರ್ಯ ನಿರ್ವಹಿಸುತ್ತಿರುವ ವಿವರಗಳನ್ನು ಜು.21ರೊಳಗೆ ಮಾಹಿತಿ ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.













