(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಈ ಹಿನ್ನೆಲೆ ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ಹಿತದೃಷ್ಠಿಯಿಂದ ಕೆಲವು ಷರತ್ತುಗಳನ್ನು ಪಾಲಿಸಲು ಮಂಗಳೂರು ನಗರ ಪೊಲೀಸ್ ಇಲಾಖೆ ಸೂಚಿಸಿದೆ.
ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಎಲ್ಲಾ ಆಯೋಜಕರು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಹಬ್ಬದ ಮುಂಚಿತವಾಗಿ ನಿಖರವಾದ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ. ಷರತ್ತುಗಳ ಪಾಲನೆಗಾಗಿ ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ನೀಡದಿರುವ ಆಯೋಜಕರಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಯಾವುದೇ ಷರತ್ತುಗಳ ಉಲ್ಲಂಘನೆಯಾದಲ್ಲಿ ಘಟನೆಯ ಹೊಣೆಗಾರಿಕೆ ಈ ನಿಯೋಜಿತ ವ್ಯಕ್ತಿಗಳ ಮೇಲೆ ಇರಲಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೇ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ಯಾವುದೇ ಕಾರಣಕ್ಕೂ ರಾತ್ರಿ 11:30 ಗಂಟೆಯ ನಂತರ ಮೆರವಣಿಗೆಯನ್ನು ನಡೆಸಲು ಅನುಮತಿ ಇಲ್ಲ. ಈ ಸಮಯದ ನಂತರ ನಡೆಯುವ ಯಾವುದೇ ಸಮಾವೇಶವನ್ನು ಕಾನೂನುಬಾಹಿರ ಸಮಾವೇಶವೆಂದು ಪರಿಗಣಿಸಲಾಗುವುದು. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಆ ಸ್ಥಳದ ಮಾಲೀಕರಿಂದ ನಿರಾಕ್ಷೇಪಣಾ ಪತ್ರ (NOC) ಪಡೆದು ಹಾಜರುಪಡಿಸುವುದು ಕಡ್ಡಾಯವಾಗಿದೆ.
ನಿಯಮ ಉಲ್ಲಂಘನೆಯಾದಲ್ಲಿ ಭಾರತೀಯ ನ್ಯಾಯ ಸಂಹಿತ 2023 ರ ಕಲಂ: 189 (ಕಾನೂನುಬಾಹಿರ ಕೂಟ) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ: 92(1) (ಸಾರ್ವಜನಿಕ ಶಾಂತಿಯ ಉಲ್ಲಂಘನೆ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಡಿ.ಜೆ, ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧವಾಗಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತ ಅನುಮತಿ ಅಗತ್ಯ. ಮತ್ತು ರಾತ್ರಿ 10 ಗಂಟೆಗೆ ಅವುಗಳನ್ನು ಸ್ಥಗಿತಗೊಳಿಸಬೇಕು. ಶಬ್ದ ಮಟ್ಟಗಳು ಈ ಮಿತಿಗಳ ಒಳಗಿರಬೇಕು: ವಾಣಿಜ್ಯ ಪ್ರದೇಶ – 65 ಡೆಸಿಬಲ್, ವಾಸಸ್ಥಳ – 55 ಡೆಸಿಬಲ್, ನಿಶ್ಯಬ್ದ ವಲಯ – 50 ಡೆಸಿಬಲ್, ನಿಯಮ ಉಲ್ಲಂಘನೆಯಾದಲ್ಲಿ ಕಲಂ: 270 ಮತ್ತು ಕಲಂ: 223 ಭಾರತೀಯ ನ್ಯಾಯ ಸಂಹಿತೆ 2023 (ಸಾರ್ವಜನಿಕ ಉಪದ್ರವ ಮತ್ತು ಆದೇಶಕ್ಕೆ ಅವಿಧೇಯತೆ), ಪರಿಸರ ಸಂರಕ್ಷಣಾ ಕಾಯ್ದೆ 1986 ರ ಕಲಂ: 15, ಶಬ್ದ ಮಾಲಿನ್ಯ ನಿಯಮಗಳು 2000, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 31 ಮತ್ತು ಸ್ಫೋಟಕಗಳ ಕಾಯ್ದೆ 1884 ಅಡಿಯಲ್ಲಿ ಕ್ರಮ.
ಆಯೋಜಕರು ಸ್ಥಳದಲ್ಲಿ 24×7 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹಿಸಬೇಕು. ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 31, 34, 70 ಮತ್ತು ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕ್ರಮಗಳು (ಕ್ರಮಗಳು) ಕಾಯ್ದೆ 2017 ರ ಕಲಂ: 3(1) ಮತ್ತು 6 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಕಾರ್ಯಕ್ರಮದ ಸಂದರ್ಭ ಯಾವುದೇ ಘೋಷಣೆಗಳು, ಭಿತ್ತಿಪತ್ರಗಳು, ಪ್ರದರ್ಶನಗಳು ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ವಿಷಯಗಳು ಯಾವುದೇ ಧರ್ಮದ ವಿರೋಧ ಅಥವಾ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿರಬಾರದು.
ಉಲ್ಲಂಘನೆಯಾದಲ್ಲಿ ಕಲಂ:196 (ದ್ವೇಷಭಾವನೆ ಉಂಟುಮಾಡುವುದು), 299 (ಧಾರ್ಮಿಕ ನಂಬಿಕೆಗೆ ಅಪಮಾನು, 352/353 (ಸಾರ್ವಜನಿಕ ಕೇಡು) BNS 2023 ಅಡಿಯಲ್ಲಿ ಕ್ರಮ.
ಕಾರ್ಯಕ್ರಮದ ವೇಳೆ ಸಾಮರ್ಥ್ಯ ಮೀರದಂತೆ ಜನಸಮೂಹ ನಿಯಂತ್ರಿಸಬೇಕು. ಸಮರ್ಪಕವಾಗಿ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು.
ಕಾರ್ಯಕ್ರಮ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ನಿಯಂತ್ರಿಸಲು ಅಗ್ನಿ ಶಾಮಕಗಳು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಳ್ಳುವುದು ಕಡ್ಡಾಯವಾಗಿವೆ. ಬೆಂಕಿಯ ಮೂಲಗಳ ಬಳಿಯಲ್ಲಿ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳನ್ನು ಇರಿಸಬಾರದು. ವಿಷಕಾರಿ ಬಣ್ಣಗಳು, ನಿಷೇಧಿತ ರಾಸಾಯನಿಕಗಳು, ಏಕ ಬಳಕೆ ಪ್ಲಾಸ್ಟಿಕ್ ನಿಷೇದಿಸಲಾಗಿದೆ. ವಾಹನ ಮತ್ತು ಪಾದಚಾರಿ ಸಂಚಾರಕ್ಕೆ ಯಾವುದೇ ತಡೆ ಇಲ್ಲದಂತೆ ವ್ಯವಸ್ಥೆ ಮಾಡಬೇಕು. ತುರ್ತು ಮಾರ್ಗಗಳಿಗೆ ತಡ ಉಂಟುಮಾಡಬಾರದು. ನಿಗದಿತ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು. ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟು ಮಾಡಬಾರದು. ಹಾನಿ ಸಂಭವಿಸಿದಲ್ಲಿ BNS 2023ರ ಕಲಂ:117/118, 324/326 ಮತ್ತು ಕರ್ನಾಟಕ ಸಾರ್ವಜನಿಕ ಆಸ್ತಿ ಹಾನಿ ತಡ ಕಾಯ್ದೆ 1984 ರ ಕಲಂ: 3 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಕಾರ್ಯಕ್ರಮದ ಪೂರ್ಣ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಅನುಮತಿ ಪತ್ರದಲ್ಲಿ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಪೊಲೀಸ್ ಸೂಚನೆಗಳನ್ನು ಪಾಲಿಸಬೇಕು. ಕಾರ್ಯಕ್ರಮದ ಸಮಯ ಮಹಿಳೆಯರ ಚುಡಾವಣೆ, ಹಿಂಬಾಲಿಸುವುಕೆ, ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳು ನಡೆಯದಂತೆ ನೋಡಿಕೊಳ್ಳಬೇಕು. ಉಲ್ಲಂಘನೆ: BNS 2023 ರ ಕಲಂ: 74, 75, 77, 78 ಅಡಿಯಲ್ಲಿ ಕ್ರಮ.
ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಮುಂಚಿತ ಅನುಮತಿ ಇಲ್ಲದೆ ಹಾಕಬಾರದು. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಹರಿತವಾದ ಆಯುಧಗಳು ಇತ್ಯಾದಿ ಅಪಾಯಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟ ಮಾಡಬಾರದು. ಉಲ್ಲಂಘನೆ Arms Act 1959 ರ ಕಲಂ: 25 ಅಡಿಯಲ್ಲಿ ಕ್ರಮ.
ಮುಂಚಿತ ಅನುಮತಿ ಇಲ್ಲದೆ ಯಾವುದೇ ಡೋನ್ ಅಥವಾ UAV ಬಳಸುವುದು ನಿಷಿದ್ಧ. ಮೆರವಣಿಗೆ ಅಥವಾ ಪ್ರದರ್ಶನಗಳಲ್ಲಿ ಪ್ರಾಣಿಗಳನ್ನು ಬಳಸಲು ಮುಂಚಿತ ಅನುಮತಿ ಪಡೆಯಬೇಕು ಮತ್ತು ಪ್ರಾಣಿ ಹಕ್ಕುಗಳ ನಿಯಮ ಪಾಲನೆ ಕಡ್ಡಾಯ. ಪೊಲೀಸರು ಅಥವಾ ಅಧಿಕೃತ ಅಧಿಕಾರಿಗಳು ಯಾವುದೇ ಸಮಯದಲ್ಲಿ ಸ್ಥಳವನ್ನು ತಪಾಸಣೆ ಮಾಡಬಹುದು. ತಪಾಸಣೆಗೆ ಅಡ್ಡಿ ಮಾಡುವುದು ಕಂಡುಬಂದಲ್ಲಿ BNS 2023 ರ ಕಲಂ: 221 ಅಡಿಯಲ್ಲಿ ಕ್ರಮ.
ವಿಧಿಸಲಾದ ಯಾವುದೇ ಷರತ್ತುಗಳ ಉಲ್ಲಂಘನೆಯು ಭಾರತೀಯ ನ್ಯಾಯ ಸಂಹಿತೆ 2023, ಕರ್ನಾಟಕ ಪೊಲೀಸ್ ಕಾಯ್ದೆ 1963, ಪರಿಸರ ಸಂರಕ್ಷಣಾ ಕಾಯ್ದೆ 1986, ಮೋಟಾರು ವಾಹನ ಕಾಯ್ದೆ 1988, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಶಸ್ತ್ರಾಸ್ತ್ರ ಕಾಯ್ದೆ 1959, ಡ್ರೋನ್ ನಿಯಮಗಳು 2021, ಸ್ಫೋಟಕಗಳ ಕಾಯ್ದೆ 1884 ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಕುಮಾರ್ ರೆಡ್ಡಿ ಮಂಗಳೂರು, ಸಾರ್ವಜನಿಕ ಕಾರ್ಯಕ್ರಮ ಮತ್ತು ಮೆರವಣಿಗೆಗಳ ಆಚರಣೆ: ಷರತ್ತು ವಿಧಿಸಿ ಎಚ್ಚರಿಸಿದ್ದಾರೆ.













