(ನ್ಯೂಸ್ ಕಡಬ) newskadaba.com ಜೂ. 30. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ಅಲ್ಪಸಂಖ್ಯಾತ 9 ಮತ್ತು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ಅವಕಾಶ ಕಲ್ಪಿಸಿಕೊಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಎಂ. ಪಿ. ಮೊಯಿದಿನಬ್ಬ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಕೂಡ ಎಸ್ ಎಸ್ ಪಿ ಪೋರ್ಟಲ್ ನಲ್ಲಿ 9 ಮತ್ತು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿರಲಿಲ್ಲ, ಕಳೆದ ಜನವರಿ ತಿಂಗಳಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರು ಮತ್ತು ಅಧಿಕಾರಿಗಳು ದ.ಕ. ಜಿಲ್ಲೆಗೆ ಭೇಟಿ ನೀಡಿ ಉಭಯ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ಸಭೆಯಲ್ಲಿ ಈ ಸಮಸ್ಯೆಯ ಕುರಿತು ನಾನು ಪ್ರಸ್ತಾಪ ಮಾಡಿದಾಗ ಈ ಬಗ್ಗೆ ಅಗತ್ಯ ಕ್ರಮದ ಭರವಸೆ ನೀಡಲಾಗಿತ್ತು.
ಆದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೂ ಪ್ರೌಢ ಶಿಕ್ಷಣದ ಮಹತ್ವದ ಘಟ್ಟವಾದ 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ದೇಶನಾಲಯ ಅನ್ಯಾಯ ಮಾಡಿದೆ ಎಂದು ಮೊಯಿದಿನಬ್ಬ ಅವರು ಮುಖ್ಯಮಂತ್ರಿಗಳು ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.









