(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 26. ಕಟ್ಟಡ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣ ಪತ್ರವಿಲ್ಲದೇ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದ್ದು, ಹೀಗಾಗಿ ಜನರು ಈ ಅನುಮತಿಗಳು ಇಲ್ಲದೆ ಮನೆ ಕಟ್ಟಬೇಡಿ ಎಂದು ಡಿಸಿಎಂ ಡಿಕೆಶಿವಕುಮಾರ್ ಮತ್ತೊಮ್ಮೆ ಎಚ್ಚರಿಸಿದ್ದಾರೆ.
ಈ ಸಂಬಂಧ ವಿಧಾನಸೌಧದಲ್ಲಿ ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶಕ್ಕೆ ಈ ತೀರ್ಪು ಆನ್ವಯವಾಗಲಿದ್ದು, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಇದುವರೆಗೂ 2.50 ಲಕ್ಷ ಜನ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಅನುಮತಿ ಪಡೆಯದೇ ಮನೆ ಕಟ್ಟಿಕೊಂಡು, ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಕಾನೂನು ಸಲಹೆಗಾರರ ಜತೆ ಈ ವಿಚಾರವಾಗಿ ಚರ್ಚಿಸಿ, ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂದು ಅಭಿಪ್ರಾಯ ಕೇಳಿದ್ದೇನೆ ಎಂದು ತಿಳಿಸಿದರು.
ಅಲ್ಲದೆ ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಯಾರೂ ಮನೆ ಕಟ್ಟಬೇಡಿ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆ ಸಾರ್ವಜನಿಕರು ಮತ್ತೆ ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಈ ವಿಚಾರದಲ್ಲಿ ಅಕ್ರಮವಾಗಿ ಮನೆ ಕಟ್ಟಿದರೆ ಸಕ್ರಮ ಮಾಡುವುದು ಕಷ್ಟ. ನೀರು ಹಾಗೂ ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂದು ತಿಳಿಸಿದರು.













